Advertisement

ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಲಸಿಕಾ ಸತ್ರಕ್ಕೆ ಸಿದ್ಧತೆ

11:55 AM Jun 19, 2021 | Team Udayavani |

ಚಿತ್ರದುರ್ಗ: ಕೋವಿಡ್‌ 19 ವೈರಸ್‌ನಿಂದ ಆಗುತ್ತಿರುವ ಸಾವು ನೋವಿಗೆ ಲಸಿಕೆಯೊಂದೇ ಪರಿಹಾರ ಎನ್ನುವುದು ದೃಢವಾಗುತ್ತಿದ್ದಂತೆ ಜನ ಕೂಡಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ,ಇದಕ್ಕೆ ತಕ್ಕಂತೆ ಆರೋಗ್ಯ ಇಲಾಖೆ ಕೂಡಾ ಭರದ ಸಿದ್ಧತೆಯಲ್ಲಿ ತೊಡಗಿದೆ.

Advertisement

ಜುಲೈ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ವಿತರಣೆಗೆ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಪಲ್ಸ್‌ ಪೋಲಿಯೋ ಮಾದರಿಯಲ್ಲಿ ಲಸಿಕಾ ಸತ್ರ ಹಾಗೂ ಲಸಿಕಾ ವಿತರಣೆಗೆ ಬೂತ್‌ ನಿರ್ಮಿಸಲು ಸ್ಥಳ ಗುರುತಿಸಲಾಗುತ್ತಿದೆ.

ಈಗಾಗಲೇ ಕೊರೊನಾ ವಾರಿಯರ್ಸ್‌, ಫ್ರೆಂಟ್‌ ಲೈನ್‌ ವಾರಿಯರ್ಸ್‌ ಸೇರಿದಂತೆ ಆದ್ಯತಾ ವಲಯಕ್ಕೆಲಸಿಕೆ ನೀಡುವಲ್ಲಿ ಚಿತ್ರದುರ್ಗ ಆರೋಗ್ಯ ಇಲಾಖೆ ಟಾಪ್‌ ಟೆನ್‌ ಜಿಲ್ಲೆಗಳ ಪಟ್ಟಿಯಲ್ಲಿದೆ. 60 ವರ್ಷಮೇಲ್ಟಟ್ಟವರಿಗೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ. ಈಗ ಇರುವ ಸವಾಲು 18 ರಿಂದ 45 ಹಾಗೂ 45 ವರ್ಷ ಮೇಲ್ಪಟ್ಟವರಿಗೆ ವಿತರಿಸಲಾಗುವುದು. ನಿರೀಕ್ಷಿತ ಪ್ರಮಾಣದಲ್ಲಿಲಸಿಕೆಯ ಸರಬರಾಜು ಇಲ್ಲದಿದ್ದರೂ ಎರಡನೇ ಡೋಸ್‌ ಅವಧಿ ವಿಸ್ತರಣೆಯಿಂದ ತುಸು ಒತ್ತಡ ಕಡಿಮೆಯಾಗಿದೆ. ಜಿಲ್ಲೆಗೆ ಪ್ರತಿ ದಿನ 12 ಸಾವಿರ ಜನರಿಗೆ ಲಸಿಕೆ ಒಡಗಿಸಬೇಕು ಎಂಬ ಟಾರ್ಗೆಟ್‌ ಸರ್ಕಾರವೇ ನೀಡಿದೆ. ಆದರೆ, ಪ್ರತಿ ದಿನ 5 ರಿಂದ6 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಕಾರಣ ಪೂರೈಕೆಯಲ್ಲಿ ಇನ್ನೂ ಸಾಕಷ್ಟು ಸುಧಾರಣೆ ಆಗಬೇಕಿದೆ.

18 ವರ್ಷ ಮೇಲ್ಪಟ್ಟವರು 8 ಲಕ್ಷ ಮಂದಿ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರು 8,04,022 ಜನರಿದ್ದರೆ, 45 ವರ್ಷ ಮೇಲ್ಪಟ್ಟವರು 4,61,200 ಮಂದಿ ಇದ್ದಾರೆ. ಸದ್ಯ ಜಿಲ್ಲೆಯಲ್ಲಿ 170 ರಿಂದ 210 ಕಡೆ ಲಸಿಕೆ ವಿತರಿಸಲಾಗುತ್ತಿದೆ. ಜು.1 ರಿಂದ ಲಸಿಕಾ ಸತ್ರ ಆರಂಭವಾದರೆ ಹೆಚ್ಚು ಸಿಬ್ಬಂದಿ ನಿಯೋಜನೆಮಾಡಬೇಕಾಗುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿರುವ 1400 ಆಶಾ ಕಾರ್ಯಕರ್ತೆಯರು, 1300 ಮಂದಿ ಕಿರಿಯ ಆರೋಗ್ಯ ಸಹಾಯಕರನ್ನು ಪಟ್ಟಿಮಾಡಿಕೊಂಡು ಅವರ ವ್ಯಾಪ್ತಿಯಲ್ಲಿ ಬರುವ 18 ಹಾಗೂ 45 ವರ್ಷ ಮೇಲ್ಪಟ್ಟವರ ಪಟ್ಟಿ ತಯಾರಿಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿ 107 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ.ಕೆಲ ಉಪಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 173 ಸ್ಥಳಗಳಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಹೆಚ್ಚಿನ ಪ್ರಮಾಣದ ಲಸಿಕೆ ಬಂದರೆ ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 343 ಕೇಂದ್ರಗಳನ್ನು ಗುರುತಿಸಿದೆ.

Advertisement

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಥವಾ 6 ಹಳ್ಳಿಗಳಿಗೆ ಒಂದು ಗುತ್ಛ ಮಾಡಿಕೊಂಡು ಅಲ್ಲಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉಪಕೇಂದ್ರ ಮಾಡಿ ಅಲ್ಲಿನ ಆಶಾ, ಅಂಗನವಾಡಿ, ಎಎನ್‌ಎಂ ಮೂಲಕ ಲಸಿಕೆ ವಿತರಣೆಗೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ.

ಶೇ.82 ಸಾಧನೆ :

ಜಿಲ್ಲೆಯಲ್ಲಿ ಈವರೆಗೆ 4.16 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಹಲವು ವಯೋಮಾನದ ಗುಂಪುಗಳಲ್ಲಿ ಜಿಲ್ಲೆಯ ಸಾಧನೆ ಶೇ.82ರಷ್ಟಿದೆ. 13 ಸಾವಿರಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಮೊದಲ ಡೋಸ್‌ ಪಡೆದಿದ್ದಾರೆ. ಇದರಲ್ಲಿ 9 ಸಾವಿರಕ್ಕೂ ಅಧಿಕ ಸಿಬ್ಬಂದಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ 2.78 ಲಕ್ಷ ಜನರು ಮೊದಲ ಹಾಗೂ 70.2 ಸಾವಿರ ಜನರು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಮೊದಲ ಹಂತದಲ್ಲಿ ರಾಜ್ಯ ಸರ್ಕಾರ ನೀಡಿದ ಲಸಿಕಾ ವಿತರಣೆ ಟಾರ್ಗೆಟ್‌ನಲ್ಲಿ ಶೇ.60 ರಷ್ಟು ಸಾಧನೆ ಮಾಡಿದ್ದೇವೆ. ಉಳಿದ ಸಾಧನೆಗೆ ತಳಮಟ್ಟದಿಂದ ಸಿದ್ಧತೆ ನಡೆಯುತ್ತಿದೆ. -ಡಾ.ಪಿ.ಸಿ. ಕುಮಾರಸ್ವಾಮಿ. ಆರ್‌ಸಿಎಚ್‌ ಅಧಿಕಾರಿ.

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next