ಹುಣಸೂರು: ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸಮುದಾಯ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸುವ ಕೆಲಸ ಯುವಶಕ್ತಿಯಿಂದಾಗಬೇಕಿದ್ದು, ಸ್ವಯಂಸೇವಕರಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಗಾವಡಗೆರೆ ಗುರು ಲಿಂಗ ಜಂಗಮ ದೇವರ ಮಠದ ನಟರಾಜಸ್ವಾಮೀಜಿ ಮನವಿ ಮಾಡಿದರು.
ನಗರದಲ್ಲಿ ಶುಕ್ರವಾರ ಫಾದರ್ ಜಾರ್ಜ್ ಮಾರ್ಟಿಸ್, ಜಮಾತೆ ಇಸ್ಲಾಂ ಸಂಘಟನೆಯ ಮಹಮದ್ ಅಬಿದಿನ್ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಜನರ ಕಲ್ಯಾಣಕ್ಕಾಗಿ ಮಠ, ಮಂದಿರ, ಮಸೀದಿಗಳು ದುಡಿಯ ಬೇಕಾಗಿದೆ ಎಂದರು.
ಜನರ ಆರೋಗ್ಯ ಕಲ್ಯಾಣಕ್ಕೆ ಎಲ್ಲರೂ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಸ್ತುತ ಕೋವಿಡ್ಎಲ್ಲರನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಈ ವೇಳೆಯಲ್ಲಿ ಪ್ರತಿ ಯೊಬ್ಬರೂ ಜಾತ್ಯತೀತ ಮನಸ್ಸಿನಿಂದ ಒಬ್ಬರಿಗೊಬ್ಬರು ನೆರವಾಗುವ ಮೂಲಕ ಆರೋಗ್ಯ ರಕ್ಷಾ ಕವಚವಾಗಬೇಕಿದೆ ಎಂದರು. ಯುವ ಸಮುದಾಯವನ್ನು ಶಕ್ತಿಯನ್ನಾಗಿಸಿಕೊಂಡಿರುವ ಭಾರತದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಅವರು ತಿಳಿಸಿದರು.
ಫಾದರ್ ಜಾರ್ಜ್ ಮಾರ್ಟಿಸ್ ಮಾತನಾಡಿ, ಕೋವಿಡ್ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಕಾಡುತ್ತಿದೆ. ಇದೊಂದು ಸಾಮಾಜಿಕ ಶತ್ರುವಾಗಿದ್ದು, ನಾಗರಿಕರು ಸರ್ಕಾರದೊಂದಿಗೆ ಕೈಜೋಡಿಸಿ ಲಸಿಕೆ ಪಡೆದು ರಕ್ಷಾ ಕವಚ ಹೊಂದಿ ದೇಶದ ಸುರಕ್ಷತೆ ಮತ್ತು ವೈಯಕ್ತಿಕವಾಗಿ ಸುರಕ್ಷತೆ ಕಾಪಾಡಬೇಕೆಂದರು.
ಆಮಾತೆ ಇಸ್ಲಾಂ ಸಂಘಟನೆಯ ಮುಖಂಡ ಮಹಮದ್ ಅಬಿದಿನ್ ಮಾತನಾಡಿ, ವಿಶ್ವದಲ್ಲಿ ಹಲವು ದೇಶಗಳು ಸಂಪತ್ತನ್ನು ಹೊಂದಿದ್ದರೂ ಸಂತೋಷ ಅನುಭವಿಸಲು ಆರೋಗ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಸಂತೋಷ ಮತ್ತು ಸಂಪತ್ತು ಎರಡೂ ಇದ್ದು, ಎಚ್ಚರದಿಂದ ಆರೋಗ್ಯ ಕಾಪಾಡಿಕೊಂಡಲ್ಲಿ ಮಾತ್ರ ಹೊಸ ದಿಕ್ಕಿನಲ್ಲಿದೇಶ ಮುನ್ನಡೆಯಬಹುದಾಗಿದೆ. ಎಲ್ಲರೂ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನುಅನುಸರಿಸಬೇಕು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಅಜೀಜ್‌ವುಲ್ಲಾ ಇದ್ದರು.