ಹೊಸದಿಲ್ಲಿ: ಯುವಜನತೆ ಮತ್ತು ಮಧ್ಯ ವಯಸ್ಸಿನ ವೃತ್ತಿಪರರು ಸಹಿತ ದೇಶದ ಶೇ.70ರಷ್ಟು ಜನರಿಗೆ ಕೋವಿಡ್ ಲಸಿಕೆ ವಿತರಿಸಬೇಕೆಂದರೆ ರಾಜ್ಯಗಳಿಗೆ ಬರೋಬ್ಬರಿ 30 ಸಾವಿರ ಕೋಟಿ ರೂ.ಗೂ ಅಧಿಕ ಆರ್ಥಿಕ ಸಂಪನ್ಮೂಲದ ಅಗತ್ಯ ಬೀಳಬಹುದು. ಈ ಪೈಕಿ ಕರ್ನಾಟಕಕ್ಕೆ 1,573 ಕೋಟಿ ರೂ.ಗಳಷ್ಟು ವೆಚ್ಚವಾಗಬಹುದು.
ಹೀಗೆಂದು ಪ್ರಸ್ತುತ ದತ್ತಾಂಶಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಿ ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಮೇ 1ರಿಂದ 18 ವರ್ಷ ದಾಟಿದ ಎಲ್ಲರೂ ಲಸಿಕೆ ಪಡೆಯಲು ಅರ್ಹರು ಎಂದು ಸರಕಾರ ಘೋಷಿಸಿದ ಬೆನ್ನಲ್ಲೇ ಈ ಅಂಕಿಅಂಶ ಹೊರಬಿದ್ದಿದೆ.
ಒಂದು ಲಸಿಕೆಗೆ 400 ರೂ. ಎಂದು ಅಂದಾಜಿಸಿದರೆ, 18ರಿಂದ 44ರ ವಯೋಮಾನದವರಿಗೆ ಲಸಿಕೆ ನೀಡಲು ರಾಜ್ಯಗಳಿಗೆ 30 ಸಾವಿರ ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಉತ್ತರಪ್ರದೇಶಕ್ಕೆ 5 ಸಾವಿರ ಕೋಟಿ ರೂ.ಗೂ ಹೆಚ್ಚು ಖರ್ಚಾದರೆ, ಇತರ ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಬಿಹಾರ, ಪ.ಬಂಗಾಲಕ್ಕೆ 2,500 ಕೋಟಿಗೂ ಅಧಿಕ ಆರ್ಥಿಕ ಸಂಪನ್ಮೂಲ ಬೇಕಾಗಬಹುದು. ಇನ್ನು ಕೇರಳ, ಪಂಜಾಬ್‌ನಂಥ ರಾಜ್ಯಗಳಿಗೆ 700 ಕೋಟಿ ರೂ.ಗಳಷ್ಟು ವೆಚ್ಚವಾಗಬಹುದು. ಕೇಂದ್ರದ ನೆರವು, ಖಾಸಗಿ ವಲಯ ಪಾಲ್ಗೊಳ್ಳುವಿಕೆಯು ರಾಜ್ಯಗಳ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು ಎಂದೂ ವರದಿ ಹೇಳಿದೆ.
ಲಸಿಕಾ ನೀತಿ ತಾರತಮ್ಯ: ವಿಪಕ್ಷ ಟೀಕೆ :
ಹೊಸದಿಲ್ಲಿ/ಕೋಲ್ಕತಾ: ಮುಂದಿನ ತಿಂಗಳಿಂದ ಕೋವಿಡ್ ಲಸಿಕೆಗಳ ದರದಲ್ಲಿ ಏರಿಕೆಯಾಗಲಿರುವ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ದರ ನಿಗದಿ ಮಾಡುವ ವ್ಯವಸ್ಥೆಯನ್ನು ಸರಕಾರದ ವ್ಯಾಪ್ತಿಯಿಂದ ಹೊರಗಿಟ್ಟಿರುವುದನ್ನು ಕಾಂಗ್ರೆಸ್, ಟಿಎಂಸಿ ಪ್ರಶ್ನೆ ಮಾಡಿವೆ.
ಸರಕಾರದ ಲಸಿಕಾ ನೀತಿ ತಾರತಮ್ಯದಿಂದ ಕೂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೂರಿದ್ದಾರೆ. ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, 18-45 ವರ್ಷ ವಯೋಮಿತಿಯವರಿಗೆ ಲಸಿಕೆ ನೀಡುವ ಹೊಣೆಯಿಂದ ಕೇಂದ್ರ ನುಣುಚಿಕೊಂಡಂತಿದೆ. ದೇಶಾದ್ಯಂತ ಒಂದೇ ರೀತಿಯ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದೇ ದೇಶ, ಒಂದೇ ಪಕ್ಷ ಒಬ್ಬನೇ ನಾಯಕ ಎಂದು ಪ್ರತಿಪಾದಿಸುವ ಬಿಜೆಪಿ, ದೇಶಕ್ಕೆ ಒಂದೇ ರೀತಿಯಲ್ಲಿ ಲಸಿಕೆ ದರ ಯಾಕೆ ನಿಗದಿ ಮಾಡಲಿಲ್ಲ ಎಂದು ಟಿಎಂಸಿ ನಾಯಕಿ ಮಮತಾ ಟ್ವೀಟ್ ಮಾಡಿದ್ದಾರೆ. ದೇಶದ ಪ್ರತಿಯೊಬ್ಬನಿಗೂ ಉಚಿತವಾಗಿಯೇ ಲಸಿಕೆ ನೀಡಬೇಕಾದ ಅಗತ್ಯವಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜತೆಗೆ ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿರುವ ದೀದಿ, ಲಸಿಕೆಯ ದರ ನಿಗದಿ ತಾರತಮ್ಯದಿಂದ ಕೂಡಿದೆ ಎಂದಿದ್ದಾರೆ.