Advertisement

ನಿತ್ಯ 20 ಸಾವಿರ ಲಸಿಕೆ ಗುರಿ

12:39 PM Apr 02, 2021 | Team Udayavani |

ಮೈಸೂರು: ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಗುರುತಿಸಿ ಈ ಏಪ್ರಿಲ್‌ ತಿಂಗಳಿನ ಎಲ್ಲ ದಿನಗಳಲ್ಲಿಯೂ ಕಡ್ಡಾಯವಾಗಿ ಕೊವಿಡ್‌ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಲಸಿಕೆಯನ್ನು ನೀಡುವ ಸಲುವಾಗಿ ಈ ತಿಂಗಳಿನ ಎಲ್ಲ ಸರ್ಕಾರಿ ರಜೆಗಳನ್ನು ರದ್ದು ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ 8 ಲಕ್ಷ ಜನರಿಗೆ ಲಸಿಕೆ ನೀಡಬೇಕಾಗಿದ್ದು, ಇದಕ್ಕಾಗಿ ಜನರನ್ನು ಗುರುತಿಸಬೇಕಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಪ್ರತಿದಿನ 10 ಸಾವಿರ ಲಸಿಕೆ ನೀಡಲಾಗುತ್ತಿದ್ದು, ಇನ್ನು ಮುಂದೆ ಪ್ರತಿದಿನ 20 ಸಾವಿರ ಜನರಿಗೆ ಲಸಿಕೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಸೊಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ವ್ಯಾಕ್ಸಿನೇಷನ್‌ ಕೂಡ ಸರಿಯಾಗಿ ನಡೆಯಬೇಕಿದೆ. ಪ್ರಾರಂಭದಲ್ಲಿ ಹೆಚ್ಚಿನ ಜನರು ಬಂದ ಕಾರಣ ಲಸಿಕೆ ಸಾಕಾಗಲಿಲ್ಲ ಎಂಬ ಕಾರಣಕ್ಕೆ ನಿಂತು ಹೋಗಿತ್ತು. ಆದರೆ, ಈಗ 20 ಲಕ್ಷ ಲಸಿಕೆಗಳು ಲಭ್ಯವಿದ್ದು, ಯಾವುದೇ ಲಸಿಕೆಯ ಕೊರತೆ ಇಲ್ಲವಾಗಿರುವ ಕಾರಣ ಈ ಒಂದು ತಿಂಗಳು ಮಾತ್ರ ಕೋವಿಡ್‌ ಪರೀಕ್ಷೆ ಮಾಡಿ ಲಸಿಕೆ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಪ್ರತಿ ಹಳ್ಳಿಯಲ್ಲೂ ತಹಶೀಲ್ದಾರ್‌ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಸಭೆ ನಡೆಸಿ, ಸಾರ್ವಜನಿಕರು ಸೇರುವ ಸ್ಥಳಗಳಾದ ಬಸ್‌ ನಿಲ್ದಾಣಗಳಲ್ಲಿನ ಜನರನ್ನು ಮಾತ್ರ ಗುರುತಿಸುವುದಲ್ಲದೆ ಲಸಿಕೆ ಪಡೆಯಲು ಅರ್ಹರಿರುವವರನ್ನೂ ಕೂಡ ಗುರುತಿಸಿ ತಾಲೂಕಿನ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರ್‌ ನಾಥ್‌, ಮೈಸೂರು ತಹಶೀಲ್ದಾರ್‌ ರಕ್ಷಿತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ಪದ್ಮ ಇತರರಿದ್ದರು.

Advertisement

ಕೋವಿಡ್‌ ಕೇರ್‌ ಸೆಂಟರ್‌ ಮತ್ತೆ ಪ್ರಾರಂಭ :

ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದರೂ ಕೋವಿಡ್‌ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಉಂಟಾಗಬಾರದು ಎಂಬ ಮುಂದಾಲೋಚನೆಯಿಂದ ನಗರ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಭವನವನ್ನು ಜಿಲ್ಲಾಡಳಿತ ಮತ್ತೆ ಗುರುವಾರದಿಂದ ಕೋವಿಡ್‌ ಕೇರ್‌ ಸೆಂಟರ್‌ರನ್ನಾಗಿ ಪರಿವರ್ತಿಸಿದೆ. ಜನವರಿ 2ನೇ ವಾರದವರೆಗೂ ಈ ಅಕಾಡೆಮಿಕ್‌ ಭವನವದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಕಾರ್ಯ ನಿರ್ವಹಿಸಿತ್ತು. ಬಳಿಕ ಸೋಂಕಿತರ ಸಂಖ್ಯೆ ಇಳಿಕೆಯಾದ ಕಾರಣ ಮುಚ್ಚಲಾಗಿತ್ತು. ಈಗ ಮತ್ತೆ ಆರಂಭವಾಗಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ಸೋಂಕಿತರನ್ನು ಗುರುವಾರ ಈ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶದಂತೆ ನಗರ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್‌ ಭವನವನ್ನು ಮತ್ತೆ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭಿಸಲಾಗಿದ್ದು, ಗುರುವಾರ 50 ಸೋಂಕಿತರನ್ನು ದಾಖಲಿಸಾಗಿದೆ. ಸೋಂಕಿತರ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ನೋಡಲ್‌ ಅಧಿಕಾರಿ ಡಾ.ಅಶೋಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next