ಮಂಡ್ಯ: ಕೋವಿಡ್ ಲಸಿಕೆ ಸಾರ್ವಜನಿಕರಿಗೂ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ, ಎರಡನೇ ಹಂತದಲ್ಲಿ ಫ್ರಂಟ್‌ಲೈನ್ ವಾರಿಯರ್ ಕಂದಾಯಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರಿಗೆನೀಡಲಾಗಿದೆ. ಮಾ.1ರಿಂದ ನಾಲ್ಕು ದಿನಗಳ ಕಾಲ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷದಿಂದ 59ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನೋಂದಣಿಗೆ ಮನವಿ: ಲಸಿಕೆ ಪಡೆಯುವವರು ನೋಂದಣಿ ಮಾಡಿಸಬೇಕು. ಆರೋಗ್ಯ ಸೇತು, ಕೋವಿಡ್ ಹಾಗೂ ಕೋವಿಡ್ ಪೋರ್ಟಲ್‌ನ ಆನ್ ಲೈನ್ ಮುಖಾಂತರ ನೋಂದಣಿ ಮಾಡಿಸಬಹು ದಾಗಿದೆ. ಆನ್‌ಲೈನ್‌ನಲ್ಲಿ ಆಗದಿದ್ದರೆ ನೇರವಾಗಿಆಸ್ಪತ್ರೆಗಳಿಗೆ ತೆರಳಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಲಸಿಕೆ ಪಡೆಯಬಹುದು. ನೋಂದಣಿ ಮಾಡಿಸಲು ಮೊಬೈಲ್ ನಂಬರ್ ಹಾಕಬೇಕು. ಒಂದು ಮೊಬೈಲ್ ನಂಬರ್‌ನಿಂದ ನಾಲ್ಕು ಮಂದಿ ನೋಂದಣಿ ಮಾಡಬಹುದಾಗಿದೆ. ಇಲ್ಲದಿದ್ದರೆ ಆಧಾರ್ ಕಾರ್ಡ್, ಗುರುತಿನ ಚೀಟಿ, ಚಾಲನಾ ಪರವಾನಗಿ, ರೇಷನ್ ಕಾರ್ಡ್, ಪಿಂಚಣಿ ಚೀಟಿ ಸೇರಿದಂತೆ ಭಾವಚಿತ್ರವಿರುವ ಯಾವುದಾದರೂ ಒಂದು ದಾಖಲಾತಿ ಒದಗಿಸಬೇಕು. ನೋಂದಣಿ ಮಾಡುವಾಗ ಲಸಿಕೆಪಡೆಯುವ ದಿನ, ಸಮಯ ನಿಗದಿಪಡಿಸಬಹುದು ಎಂದು ತಿಳಿಸಿದರು.
ಎರಡು ಹಂತದ ಲಸಿಕೆ: ಮೊದಲು ಲಸಿಕೆ ಪಡೆದ 28ದಿನಗಳ ನಂತರ ಎರಡನೇ ಲಸಿಕೆ ಪಡೆಯಬೇಕು. 29 ದಿನದಿಂದ 42 ದಿನಗಳವರೆಗೆ ಇರಬೇಕು. ಆದ್ದರಿಂದ ಸಾರ್ವಜನಿಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡು ಕೊರೊನಾದಿಂದ ಮುಕ್ತರಾಗಬೇಕು ಎಂದು ಮನವಿ ಮಾಡಿದರು.
1.48 ಲಕ್ಷ ಮಂದಿ ಗುರಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಮಾತನಾಡಿ, ಜಿಲ್ಲೆಯಲ್ಲಿ 1.48 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ವಾರದಿಂದ ಎಲ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲುಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ 350 ರೂ. ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಭಯ, ಆತಂಕ ಬೇಡ: ಲಸಿಕೆ ಪಡೆಯಲುಯಾವುದೇ ಭಯ, ಆತಂಕ ಬೇಡ. ಲಸಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದುವರೆಗೂ ರಾಜ್ಯದಲ್ಲಿ ನಾಲ್ಕು ಸಾವು ಸಂಭವಿಸಿರುವುದುಲಸಿಕೆಯಿಂದ ಅಲ್ಲ ಎಂಬುದು ಪರೀಕ್ಷೆಯವರದಿಯಿಂದ ಬಂದಿದೆ. ಲಸಿಕೆಯಿಂದ ಜ್ವರ, ಲಸಿಕೆ ಪಡೆದ ಜಾಗದಲ್ಲಿ ಊತ ಕಂಡು ಬರಲಿವೆ. ಅದುಬಿಟ್ಟರೆ ಇನ್ಯಾವುದೇ ತೊಂದರೆ ಆಗಿಲ್ಲ. ಪ್ರತಿದಿನ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಗುರುವಾರ ಲಸಿಕೆ ನೀಡಲಾಗುತ್ತಿದೆ. ಅದಕ್ಕೆ ತೊಂದರೆಯಾಗದಂತೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ನಾಲ್ಕು ದಿನ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಜಿಪಂ ಸಿಇಒ ಎಸ್.ಎಂ.ಜುಲ್‌ಫಿಖಾರ್ ಉಲ್ಲಾ, ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.