ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಅಂದರೆ ಜ.16ರಿಂದ 29ರವರೆಗೆ 5 ರಾಜ್ಯಗಳಲ್ಲಿ ಸುಮಾರು 5 ಸಾವಿರ ಡೋಸ್‌ಗಳಷ್ಟು ಲಸಿಕೆ ವ್ಯರ್ಥವಾಗಿ ಹೋಗಿದೆ. ಈ ಪೈಕಿ ತ್ರಿಪುರಾ ಮೊದಲ ಸ್ಥಾನದಲ್ಲಿದ್ದು ಇಲ್ಲಿ ಶೇ.11ರಷ್ಟು ಲಸಿಕೆ ವೇಸ್ಟ್ ಆಗಿದೆ ಎಂದು ಹಿಂದುಸ್ತಾನ್ ಟೈಮ್ಸ್‌ನ ವರದಿ ತಿಳಿಸಿದೆ.
ಲಸಿಕೆಯ ಒಂದು ಸೀಸೆ ತೆರೆದರೆ, ಅದನ್ನು 4 ಗಂಟೆಗಳ ಒಳಗಾಗಿ ಬಳಸಬೇಕು. ತದನಂತರ ಬಳಸುವಂತಿಲ್ಲ. ಆದರೆ, ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾದ ಕಾರಣ, ಸೀಸೆಯಲ್ಲಿರುವ ಹನಿಗಳು ಖಾಲಿಯಾಗುತ್ತಿಲ್ಲ. ಹೀಗಾಗಿ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ವೇಸ್ಟ್ ಆಗುತ್ತಿದೆ ಎಂದು ವರದಿ ಹೇಳಿದೆ.
ಕೆಲವು ಕಡೆ ಅಧಿಕಾರಿಗಳು ನಿಗದಿತ ವ್ಯಕ್ತಿಗಳ ಹೊರತಾಗಿ ಇತರರನ್ನೂ ಕರೆದು ಲಸಿಕೆ ವಿತರಿಸುವ ಮೂಲಕ ವ್ಯರ್ಥವಾಗುವುದನ್ನು ತಡೆಯುತ್ತಿದ್ದಾರೆ. ಅನೇಕರು ಲಸಿಕೆ ಪಡೆಯುಲು ಹಿಂಜರಿಯುತ್ತಿದ್ದು, ಪ್ರತಿ 100 ಮಂದಿಯ ಪೈಕಿ ಕೇವಲ 55 ಮಂದಿ ಮಾತ್ರ ಲಸಿಕೆ ಪಡೆಯುತ್ತಿದ್ದಾರೆ ಎಂದೂ ವರದಿ ಹೇಳಿದೆ. ಇನ್ನು, ಜಾರ್ಖಂಡ್, ಆಂಧ್ರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ ಮತ್ತು ಛತ್ತೀಸ್‌ಗಡದಲ್ಲಿ ಲಸಿಕೆ ವ್ಯರ್ಥವಾಗಿಲ್ಲ ಎಂದು ಈ ರಾಜ್ಯಗಳ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ, ಗುರುವಾರದಿಂದ ಶುಕ್ರವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 18,855 ಮಂದಿಗೆ ಸೋಂಕು ದೃಢ ಪಟ್ಟಿದೆ.
ಲಂಕಾದಲ್ಲಿ ವಿತರಣೆ ಆರಂಭ:
ಶ್ರೀಲಂಕಾದಲ್ಲಿ ಶುಕ್ರವಾರ ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಯೋಧರು, ಭದ್ರತಾ ಸಿಬ್ಬಂದಿಗೆ ಆರಂಭದಲ್ಲಿ ಲಸಿಕೆ ನೀಡಲಾಗುತ್ತದೆ. ಭಾರತವು ಲಂಕೆಗೆ 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಕಳುಹಿಸಿದ ಬೆನ್ನಲ್ಲೇ ವಿತರಣೆ ಪ್ರಕ್ರಿಯೆ ಆರಂಭವಾಗಿದೆ.