Advertisement

ರಾಜ್ಯಕ್ಕೆ ಬಂದ ಲಸಿಕೆ ಸುಗಮ ವಿತರಣೆಯಾಗಲಿ

01:09 AM Jan 13, 2021 | Team Udayavani |

ಕೋವಿಡ್ ವೈರಸ್‌ ವಿರುದ್ಧದ ಹೋರಾಟಕ್ಕೆ ಸಿದ್ಧಗೊಂಡಿದ್ದ ಮದ್ದು, ಪ್ರಯೋಗಾಲಯಗಳಿಂದ ಹೊರಬಂದಾಯಿತು. ಮಂಗಳವಾರ ವಿಮಾನ ಮೂಲಕ ವಿವಿಧ ರಾಜ್ಯಗಳಿಗೆ ಲಸಿಕೆ ಸರಬರಾಜಾಗಿದೆ. ಪುಣೆಯಿಂದ 56 ಲಕ್ಷ ಡೋಸ್‌ ಲಸಿಕೆ ದೇಶದ 13 ನಗರಗಳಿಗೆ ತಲುಪಿದೆ. ಅಂತೆಯೇ ಕರ್ನಾಟಕದ  ಒಂದು ಪಾಲು ಬೆಂಗಳೂರಿಗೆ ಬಂದಿದೆ. ಇನ್ನೊಂದು ಪಾಲು ಬುಧವಾರ ಬೆಳಗಾವಿಗೆ ಬರಲಿದೆ. ಈಗ ರಾಜ್ಯ ಸರಕಾರದ ಮುಂದಿರುವುದು ಲಸಿಕೆ ಸುಗಮ ವಿತರಣೆ ಸವಾಲು.

Advertisement

ಬಂದಿರುವ 6.48 ಲಕ್ಷ ಡೋಸ್‌ ಲಸಿಕೆಯ ಸಂಗ್ರಹಕ್ಕೆ  ರಾಜ್ಯಮಟ್ಟದ ಸಂಗ್ರಹಾಗಾರಗಳನ್ನು ಬೆಂಗಳೂರು, ಬೆಳಗಾವಿಯಲ್ಲಿ ತೆರೆಯಲಾಗಿದೆ. ಜತೆಗೆ ಐದು ಪ್ರಾದೇಶಿಕ, 22 ಜಿಲ್ಲಾ, ಒಂದು ಮಹಾನಗರ ಪಾಲಿಕೆ ಸಂಗ್ರಹಾಗಾರವಿದೆ. 2,676 ಕೋಲ್ಡ್‌ಚೈನ್‌ ಪಾಯಿಂಟ್‌ಗಳನ್ನು ನಿಯೋಜಿಸಲಾಗಿದೆ. ಹಂತ ಹಂತವಾಗಿ ಇವುಗಳ ಮೂಲಕ ಜಿಲ್ಲಾಸ್ಪತ್ರೆಯಿಂದ, ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೂ ಲಸಿಕೆ ತಲುಪಿಸಲು ಆರೋಗ್ಯ ಇಲಾಖೆ ವ್ಯವಸ್ಥೆ ರೂಪಿಸಿದೆ. ಈ ವೇಳೆ ಸಂಗ್ರಹಾಗಾರಗಳ ಯಂತ್ರೋಪ ಕರಣಗಳು ಮತ್ತು ಸಾಗಣೆಗೆ ವ್ಯವಸ್ಥೆಗೆ ಮಾಡಿರುವ ಶೀತಲೀಕರಣ ಟ್ರಕ್‌ಗಳ ಗುಣಮಟ್ಟ ಕಾಯ್ದು ಕೊಳ್ಳುವುದು, ಸಮಯಪಾಲನೆಯಂತಹ ಪ್ರಮುಖ ಜವಾಬ್ದಾರಿ ಆರೋಗ್ಯ ಇಲಾಖೆ ಮೇಲಿದೆ.

ಈಗಾಗಲೇ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಒಂದು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ನೀಡಿರುವ ತರಬೇತಿ, ಎರಡು ಬಾರಿ ನಡೆದಿರುವ ಲಸಿಕೆ ತಾಲೀಮು (ಡ್ರೈ ರನ್‌) ವಿತರಣೆ ಕಾರ್ಯಕ್ಕೆ ಖಂಡಿತ ನೆರವಾಗಲಿದೆ. ಲಸಿಕೆ ವಿತರಣೆಗೆ ಎದುರಾಗಬಹುದಾದ ಸವಾಲುಗಳನ್ನು ಆರೋಗ್ಯ ಸಿಬಂದಿ ಅರಿತುಕೊಂಡಿದ್ದು, ಪರಿಹಾರವನ್ನು ಕಂಡುಕೊಂಡಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಉದ್ದೇಶಿಸಿರುವುದರಿಂದ ಗೊಂದಲ ಉಂಟಾಗುವ ಸಾಧ್ಯತೆ ತೀರಾ ಕಡಿಮೆ.

ಮೊದಲ ಹಂತದಲ್ಲಿ  ರಾಜ್ಯದಲ್ಲಿ 16.9 ಲಕ್ಷ ಮಂದಿಗೆ ಲಸಿಕೆ ವಿತರಿಸಲು ಉದ್ದೇಶಿಸಲಾಗಿದೆ. ಈ ಪೈಕಿ 6.6 ಲಕ್ಷ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ನೋಂದಣಿಯು ಆಗಿದೆ. ನೋಂದಣಿಯಾಗಿರುವವರಿಗೆ ಸದ್ಯ ಬಂದಿರುವ ಲಸಿಕೆ ಸಾಲಲಿದೆಯಾದರೂ, ಉದ್ದೇಶಿರುವ 16.9 ಲಕ್ಷ ಮಂದಿಗೆ ಕೊರತೆಯಾಗಬಹುದು. ಅಷ್ಟರಲ್ಲಿ ಕೇಂದ್ರ ಸರಕಾರವು ರಾಜ್ಯದ

ಇನ್ನಷ್ಟು ಪಾಲನ್ನು ಕಳುಹಿಸಿ ಕೊಡಬೇಕಿದೆ. ಈ ವಿಚಾ ರದಲ್ಲಿ ರಾಜ್ಯ ಸರಕಾರ ತ್ವರಿತವಾಗಿ ಕೇಂದ್ರದೊಡನೆ ಸಂವಹನ ನಡೆಸಬೇಕಾದ ಅಗತ್ಯವಿರುತ್ತದೆ.

Advertisement

ಈ ಮಧ್ಯೆ ಲಸಿಕೆಯು ಕಳ್ಳಮಾರ್ಗದಲ್ಲಿ ಇತರರ ಪಾಲಾಗದಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರಕಾರ ಎಚ್ಚರಿಕೆ ವಹಿಸಬೇಕಿದೆ. ಸಾರ್ವಜನಿಕರು ಲಸಿಕೆ ಪಡೆಯುವ ವಿಚಾರದಲ್ಲಿ ದುಂಬಾಲು ಬೀಳುವ ಅಗತ್ಯವಿಲ್ಲ. ಕೋವಿಡ್ ಯೋಧರ ಬಳಿಕ ಸಾರ್ವಜನಿಕರಿಗೂ ಹಂತಾನುಹಂತವಾಗಿ ಲಸಿಕೆ ಪೂರೈಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಶತಮಾನದಲ್ಲಿಯೇ ಅತ್ಯಂತ ಹೆಚ್ಚು ಕಾಡಿದ ಸೋಂಕು ಕೋವಿಡ್ ಆಗಿದ್ದು, ಇದಕ್ಕೆ ಅತೀ ಕಡಿಮೆ ಅವಧಿಯಲ್ಲಿ ಲಸಿಕೆ ಸಿದ್ದಗೊಂಡಿದೆ. ಆರಂಭದಲ್ಲಿ ಲಸಿಕೆ ಕುರಿತು ಅಪಸ್ವರಗಳು ಕೇಳಿಬಂದರೂ ಪ್ರತಿಷ್ಠಿತ ಪ್ರಯೋಗಾಲಯಗಳು, ತಜ್ಞರ ಅಭಿಪ್ರಾಯದಿಂದ ಬಹುತೇಕ ಜನರಲ್ಲಿ ಲಸಿಕೆ ಬಗ್ಗೆ ವಿಶ್ವಾಸ ಬಂದಿದೆ. ವಿತರಣೆ ಸಂದರ್ಭದಲ್ಲಿ ಸರಕಾರ ಗೊಂದಲಗಳಿಗೆ ಅವಕಾಶ ನೀಡದಂತೆ, ಅಂತೆಯೇ ಸಾರ್ವಜನಿಕರೂ ಕೂಡ ಗಾಳಿಸುದ್ದಿಗಳಿಗೆ ಕಿವಿಗೊಡದಿದ್ದರೆ ಲಸಿಕೆ ವಿತರಣೆ ಯಶಸ್ವಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next