ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ಸಾಗಾಟಕ್ಕೆ ಎಲ್ಲ ವ್ಯವಸ್ಥೆ ಅಂತಿಮಗೊಂಡಿದ್ದು, ಲಸಿಕೆ ಬರುವುದಷ್ಟೇ ಬಾಕಿ. ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಸಿಬಂದಿಗೆ ಲಸಿಕೆ ನೀಡಲಾಗುತ್ತದೆ.
ಇಂದು ಸಿಎಂ ಜತೆ ಮೋದಿ ಸಂವಾದ :
ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ದಿನ ಸಮೀಪಿಸುತ್ತಿರುವಂತೆಯೇ ಪ್ರಧಾನಿ ಮೋದಿಯವರು ಸೋಮವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳ ಸಿಎಂಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂ ತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆ ನೀಡಿದ ಬಳಿಕ ಪ್ರಧಾನಿ ಮತ್ತು ಸಿಎಂಗಳ ನಡುವೆ ನಡೆಯುತ್ತಿರುವ ಮೊದಲ ಸಂವಾದ ಇದು. ದೇಶದ ಕೊರೊನಾ ಸ್ಥಿತಿಗತಿ ಮತ್ತು ಸುಸೂತ್ರವಾಗಿ ಲಸಿಕೆ ವಿತರಣೆ ಪ್ರಕ್ರಿಯೆ ನಡೆಸುವ ಕುರಿತು ಅವರು ಚರ್ಚಿಸುವ ಸಾಧ್ಯತೆಯಿದೆ.
ವಿತರಣೆ ಮಾರ್ಗ :
ಕೇಂದ್ರ ಸರಕಾರದಿಂದ ವಿಮಾನದ ಮೂಲಕ ಬೆಂಗಳೂರು ಮತ್ತು ಬೆಳಗಾವಿಯ ರಾಜ್ಯಮಟ್ಟದ ಸಂಗ್ರಹಾಗಾರಕ್ಕೆ ಲಸಿಕೆ ಬರಲಿವೆ. ಅಲ್ಲಿಂದ ಶೀತಲೀಕರಣ ವ್ಯವಸ್ಥೆ ಯುಳ್ಳ ಟ್ರಕ್‌ಗಳ ಮೂಲಕ ಐದು ಪ್ರಾದೇಶಿಕ ಸಂಗ್ರಹಾಗಾರಗಳಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ಜಿಲ್ಲಾ ಸಂಗ್ರಹಾಗಾರಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ಶೇಖರಿಸಿಟ್ಟು, ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಕ್ಯಾರಿಯರ್ ಮೂಲಕ ಕಳುಹಿಸಲಾಗುತ್ತದೆ. ಆ ಕೇಂದ್ರಗಳಲ್ಲಿ ಲಸಿಕೆ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಬೇಕಾದ ಎಲ್ಲ ವ್ಯವಸ್ಥೆ ಪೂರ್ಣ ಗೊಂಡಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ ಡೋಸ್ ಲಸಿಕೆ ಸಿಗಲಿದೆ.
– ಡಾ| ಕೆ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ