ಲಕ್ನೋ: ಶನಿವಾರ ಒಂದೇ ದಿನ 15,353 ಕೋವಿಡ್ ಪ್ರಕರಣಗಳು ದಾಖಲಾಗಿದ್ದರಿಂದ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದೆ.
ಭಾನುವಾರ ಪ್ರಕಟಗೊಂಡಿರುವ ನೂತನ ಮಾರ್ಗಸೂಚಿಗಳನ್ವಯ ಏಪ್ರಿಲ್ 30ರ ವರೆಗೆ ರಾಜ್ಯದ ಎಲ್ಲ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮತ್ತು 500 ಸಕ್ರಿಯ ಹಾಗೂ ಪ್ರತಿನಿತ್ಯ 100 ಹೊಸ ಪ್ರಕರಣಗಳು ಪತ್ತೆಯಾಗುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಹೇರಿ ಆದೇಶ ಹೊರಡಿಸಲಾಗಿದೆ. ಸಭೆ-ಸಮಾರಂಭಗಳಿಗೆ ನೂರಕ್ಕಿಂತ ಜಾಸ್ತಿ ಜನ ಸೇರುವುದಕ್ಕೆ ನಿರ್ಬಂಧ ಹೇರಿದೆ.
ಈ ಮೊದಲು ಏಪ್ರಿಲ್ 2 ರಂದು ಆದೇಶ ಹೊರಡಿಸಿದ್ದ ಸರ್ಕಾರ, ಏಪ್ರಿಲ್ 11ರ ವರೆಗೆ 1 ರಿಂದ 8ನೇ ತರಗತಿಯ ಶಾಲೆಗಳಿಗೆ ರಜೆ ಘೋಷಿಸಿತ್ತು. ಇದೀಗ ಹೊಸ ಮಾರ್ಗಸೂಚಿಯನ್ವಯ ಇದನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದ್ದು, ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಿದೆ.
ಈಗಾಗಲೇ ಉತ್ತರ ಪ್ರದೇಶದ ಖಾನ್ಪುರ್, ಗೋರಖ್‍ಪುರ, ಗೌತಮ್ ಬುದ್ಧ ನಗರ, ಅಲ್ಹಾಬಾದ್, ಮೀರತ್, ಗಾಜಿಯಾಬಾದ್, ಬರೇಲಿ ಹಾಗೂ ಮುಜಾಫರ್ ನಗರಗಳಲ್ಲಿ ರಾತ್ರಿ ಕರ್ಪ್ಯೂ ಜಾರಿಯಲ್ಲಿದೆ.
ಇನ್ನು ಉತ್ತರ ಪ್ರದೇಶದಲ್ಲಿಯೂ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈಗಾಗಲೇ ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಹಾಗೂ ಕೋವಿಡ್ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸಿದೆ. ಕಡ್ಡಾಯ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಖಡಕ್ ಆದೇಶ ನೀಡಿದೆ.