ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುವ ಕೋವಿಡ್ ರೋಗಿಗಳಿಗೆ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ವೈದ್ಯಕೀಯ ವೆಚ್ಚ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕೋವಿಡ್‌ನಿರ್ವಹಣೆ ಕುರಿತ ಸಭೆಯಲ್ಲಿ ಚನ್ನಗಿರಿ ಶಾಸಕ ಮಾಡಾಳುವಿರೂಪಾಕ್ಷಪ್ಪ ಅವರು ರೈತರು, ಬಡವರು ಕೋವಿಡ್ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿಅವರಿಗೆ ವೈದ್ಯಕೀಯ ವೆಚ್ಚ ಭರಿಸಲು ತೊಂದರೆಯಾಗುತ್ತಿದೆ ಎಂದು ಹೇಳಿದಾಗ ಜಿಲ್ಲಾಧಿಕಾರಿಯವರು ಈ ಪ್ರತಿಕ್ರಿಯೆ ನೀಡಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ವೈದ್ಯಕೀಯ ವೆಚ್ಚ ಭರಿಸುವ ಬಗ್ಗೆ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಹಾಕಲಾಗುವುದು. ಕೋವಿಡ್ ರೋಗ ಲಕ್ಷಣಗಳು ಕಂಡುಬಂದರೂ ಕೆಲವರು ಭಯದಿಂದ ಅಥವಾ ನಿರ್ಲಕ್ಷದಿಂದ ಪರೀಕ್ಷೆಮಾಡಿಸಿಕೊಳ್ಳುತ್ತಿಲ್ಲ. ರೋಗ ತೀವ್ರ ಗಂಭೀರತೆಯನ್ನು ಪಡೆದುಕೊಂಡಾಗ ಪರೀಕ್ಷೆಗೆ ಬರುತ್ತಾರೆ. ಹೀಗಾದಾಗ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಆಸ್ಪತ್ರೆ, ಹಾಸ್ಟೆಲ್, ಅಥವಾ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಊಟ, ಉಪಹಾರ ಕಲ್ಪಿಸಬೇಕು ಎಂದರು.
ಆರೋಗ್ಯ ಇಲಾಖೆಯ ಡಾ|ಗಂಗಾಧರ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಹರಿಹರ ಶಾಸಕ ಎಸ್. ರಾಮಪ್ಪ, ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.