ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಅಲೆ ದಿನನಿತ್ಯ ಏರಿಕೆಯಾಗುತ್ತಿದ್ದು ಜನರಲ್ಲಿ ಮತ್ತೆ ಆತಂಕವನ್ನು ಹೆಚ್ಚಿಸುತ್ತಿದೆ. ಈ ಕೋವಿಡ್ ಸಂದರ್ಭವನ್ನು ಲಾಭಕ್ಕಾಗಿ ಕೆಲವು ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಬೆಡ್ ಬ್ಲಾಕಿಂಗ್ ದಂಧೆಗಳ ಹೆಸರಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಕಳೆದ ಎರಡು ದಿನಗಳ ಹಿಂದಷ್ಟೇ ಬಯಲಿಗೆ ಬಂದಿತ್ತು.
ಇನ್ನು, ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯದ ಕೊರತೆ ಹಾಗೂ ಹಾಸಿಗೆಗಳಿಗೆ ದುಬಾರಿ ಬೆಲೆಯನ್ನು ಹೇಳುವಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ ನೀಡುತ್ತಿರುವ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀನಿವಾಸ ಪೂಜಾರಿ ಸೂಚನೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳು ಕೈಗೊಂಡಿರುವ ಸಬೆಯಲ್ಲಿ, ಮಾನವ ಸಂಪನ್ಮೂಲ ಹಾಗೂ ಪರಿಕರಗಳ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಪ್ರಾಕೇಜ್ ದರಗಳ ಪರಿಷ್ಕರಣೆಗಾಗಿ ಕೋರಲಾಗಿತ್ತು, ಅದರಂತೆ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ತಾಂತ್ರಿಕ ಸಮಿತಿಯಿಂದ ಪರಿಶೀಲನೆ ಕೈಗೊಳ್ಳಲಾಯಿತು.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಪ್ರಧಾನ ಮಾಡಿರುವ ಅಧಿಕಾರಗಳ ಬಳಕೆಯಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 24(ಎಫ್) ಮತ್ತು ಸೆಕ್ಷನ್ 24 (ಎಲ್ ) ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳ ಅಡಿಯಲ್ಲಿ, ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರ ಸಾಮರ್ಥ್ಯದಲ್ಲಿ ಸಹಿ ಮಾಡಿರುವ, ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಸೂಚಿತ ಕೋವಿಡ್ ಸೋಂಕಿತರ ಚಿಕಿತ್ಸೆಯ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಿದೆ.
ಸರ್ಕಾರ ಆದೇಶಿಸಿದ ಪ್ಯಾಕೇಜ್ ದರಗಳು :
ಜನರಲ್ ವಾರ್ಡ್ : 5200 ರೂ.
ಹೆಚ್ ಡಿ ಯು : 8000 ರೂ.
ಐಸೋಲೇಷನ್ ಐಸಿಯು ವೆಂಟಿಲೇಟರ್ ರಹಿತ : 9700 ರೂ.
ಐಸೋಲೇಷನ್ ಐಸಿಯು ವೆಂಟಿಲೇಟರ್ ಸಹಿತ : 11,500 ರೂ. ಆಗಿದೆ.
ಇನ್ನು, ಈ ಆದೇಶವನ್ನು ಪಾಲಿಸದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ, 2005 ಸೆಕ್ಷನ್ (51 ರಿಂದ 60) ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಹಾಗೂ ಭಾರತೀಯ ದಂಡನಾ ಕಾಯ್ದೆಯ ಸೂಕ್ತ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.
ಓದಿ : ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ