Advertisement

ಮಹಾನಗರ ಪಾಲಿಕೆ ಮಹಿಳಾ ಅಭಿಯಂತರರಿಗೆ ಕೋವಿಡ್

08:45 AM Jun 30, 2020 | Suhan S |

ಕಲಬುರಗಿ: ಕೋವಿಡ್ ಆರ್ಭಟ ಮುಂದುವರೆದಿದ್ದು, ಪೊಲೀಸರು, ಆಶಾ ಕಾರ್ಯಕರ್ತೆಯರ ನಂತರ ಮಹಾನಗರ ಪಾಲಿಕೆ ಮಹಿಳಾ ಅಭಿಯಂತರರೊಬ್ಬರಿಗೆ ಮಹಾಮಾರಿ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.

Advertisement

ಕಳೆದ ಕೆಲ ದಿನಗಳ ಹಿಂದೆ ತಮ್ಮ ಸ್ವಂತ ಜಿಲ್ಲೆ ಬೀದರ್‌ಗೆ ಹೋಗಿ ಬಂದ ನಂತರ ಕೆಮ್ಮು, ಜ್ವರದ ಲಕ್ಷಣ ಕಾಣಿಸಿಕೊಂಡಿದ್ದವು. ಹೀಗಾಗಿ ಅವರೇ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರಾವಣ ಮಾದರಿ ನೀಡಿ ತಪಾಸಣೆಗೆ ಒಳಪಟ್ಟಿದ್ದರು. ಇದೀಗ ಅವರಿಗೆ ಸೋಂಕು ದೃಢಪಟ್ಟಿದ್ದು, ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಯಂತರರಿಗೆ ಸೋಂಕು ಖಚಿತವಾದ ಕಾರಣ ಅವರ ಸಂಕರ್ಪಕ್ಕೆ ಬಂದವರ ಗಂಟಲು ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲು ಪಾಲಿಕೆ ಆಯುಕ್ತರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ, ಪೊಲೀಸರಿಗೆ ಕೋವಿಡ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಗುಲಬರ್ಗಾ ವಿವಿ ಠಾಣೆ, ಗ್ರಾಮೀಣ ಠಾಣೆ, ಫರಹತಾಬಾದ ಠಾಣೆ ಬಳಿಕ ರೋಜಾ ಪೊಲೀಸ್‌ ಠಾಣೆ ಸಿಬ್ಬಂದಿಗೂ ಕೋವಿಡ್ ವಕ್ಕರಿಸಿದೆ. ರೋಜಾ ಠಾಣೆಯ ಮೂವರು ಪೊಲೀಸ್‌ ಸಿಬ್ಬಂದಿಗೆ ದೃಢಪಟ್ಟಿದೆ. ಅಲ್ಲದೇ, ಕೆಎಸ್‌ಆರ್‌ಪಿಯ ಓರ್ವ ಪೇದೆಗೂ ಸೋಂಕು ಕಾಣಿಸಿಕೊಂಡಿದೆ ಎಂದು ಗೊತ್ತಾಗಿದ್ದು, ಒಟ್ಟು ಎಂಟು ಜನರು ಪೊಲೀಸರು ಸೋಂಕಿನಿಂದ ಬಳಲುವಂತೆ ಆಗಿದೆ. ಸೋಮವಾರ 23 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,421ಕ್ಕೆ ಏರಿಕೆಯಾಗಿದೆ. ಇದೇ ವೇಳೆ 39 ಜನ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇಲ್ಲಿವರೆಗೆ 1,048 ಸೋಂಕಿತರು ಆಸತ್ರೆಯಿಂದ ಮನೆಗೆ ತೆರಳಿದಂತೆ ಆಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 18 ಜನ ಸೋಂಕಿತರು ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next