ಬಾಗಲಕೋಟೆ: ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿಯಲ್ಲಿ ಶಿಕ್ಷಕರಾಗಿರುವ ಬಾದಾಮಿ ಪಟ್ಟಣದ ಮಂಜುನಾಥ ನಗರದ ಸೋಂಕಿತ ಶಿಕ್ಷಕನಿಂದ ಮೂರು ವರ್ಷದ ಮಗು ಸಹಿತ ಇಬ್ಬರು ಮಕ್ಕಳಿಗೆ ಕೋವಿಡ್ ವಿಸ್ತರಣೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ.
ಬಾದಾಮಿ ಮಂಜುನಾಥ ನಗರದ ನಿವಾಸಿ ಪಿ-9153, ಮೆಣಸಗಿಯಲ್ಲಿ ಶಿಕ್ಷಕರಾಗಿದ್ದು, ಜೂ. 22ರಂದು ಸೋಂಕು ಖಚಿತಪಟ್ಟಿತ್ತು. ಇವರಿಗೆ ಬಾಗಲಕೋಟೆ ನವನಗರದ ಅವರ ಅಳಿಯ ಪಿ-8714ನಿಂದ ಸೋಂಕು ಬಂದಿತ್ತು. ಇದೀಗ ಆ ಶಿಕ್ಷಕನ ಪ್ರಾಥಮಿಕ ಸಂಪರ್ಕದಿಂದ ಪಕ್ಕದ ಮನೆಯ 10 ವರ್ಷದ ಬಾಲಕ ಪಿ-23141 (ಬಿಜಿಕೆ-229), ಮೂರು ವರ್ಷದ ಬಾಲಕ ಪಿ-23142 ಸೋಂಕು ವಿಸ್ತರಣೆಯಾಗಿದೆ.
ಇನ್ನು ಕಲಾದಗಿಯ ಪಿ-18261 ಸೋಂಕಿತನ ಸಂಪರ್ಕದಿಂದ 10 ವರ್ಷದ ಬಾಲಕಿ ಪಿ-23139 (ಬಿಜಿಕೆ-227) ಹಾಗೂ ಬಾಗಲಕೋಟೆ ತಾಲೂಕಿನ ಮುಡಪಲಜೀವಿ ಗ್ರಾಮದ ಸೋಂಕಿತ ಮೃತ ವ್ಯಕ್ತಿ ಪಿ-10642 ಪ್ರಾಥಮಿಕ ಸಂಪರ್ಕದಿಂದ ಪಕ್ಕದ ಮನೆಯ 38 ವರ್ಷದ ಮಹಿಳೆ ಪಿ-23140 (ಬಿಜಿಕೆ-228) ಸೋಂಕು ದೃಢಪಟ್ಟಿದೆ. ರವಿವಾರ ಪತ್ತೆಯಾದ ನಾಲ್ವರು ಸೋಂಕಿತರು ಸಹಿತ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 230ಕ್ಕೆ ಏರಿಕೆಯಾಗಿದೆ. ಜಿಲ್ಲೆಯಿಂದ ಜೂನ್ 20 ರಂದು ಕಳುಹಿಸಲಾದ 62 ಸ್ಯಾಂಪಲ್ ಗಳ ಪೈಕಿ 30, ಜೂನ್ 24 ರಂದು ಕಳುಹಿಸಿದ 152, ಜೂನ್ 29ರಂದು ಕಳುಹಿಸಲಾದ 226, ಜು. 1ರಂದು ಕಳುಹಿಸಲಾದ 320 ಪೈಕಿ 295 ಸ್ಯಾಂಪಲ್ ಗಳ ವರದಿ ನೆಗೆಟಿವ್ ಬಂದಿವೆ. ಜು. 4ರಂದು ಹೊಸದಾಗಿ 357 ಸ್ಯಾಂಪಲ್ ಗಳು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 1414 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಇಲ್ಲಿಯವರೆಗೆ 14,491 ಸ್ಯಾಂಪಲ್ ಕಳುಹಿಸಿದ್ದು, ಅದರಲ್ಲಿ ನೆಗೆಟಿವ್ 12764 ಬಂದಿವೆ. 230 ಜನರಿಗೆ ಸೋಂಕು ದೃಢಪಟ್ಟಿದ್ದು, ಏಳು ಜನರು ಮೃತಪಟ್ಟಿದ್ದಾರೆ.
137 ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನೂ 88 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1082 ಜನರಿಗೆ ಪ್ರತ್ಯೇಕವಾಗಿ ನಿಗಾದಲ್ಲಿ ಇಡಲಾಗಿದ್ದು,27 ಕಂಟೇನ್ಮೆಂಟ್ ಝೋನ್‌ಗಳಿವೆ. ಬೇರೆ ಬೇರೆ ರಾಜ್ಯಗಳಿಂದ ಜಿಲ್ಲೆಗೆ 15 ಜನರು ಬಂದಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ ಮೂವರಿಗೆ ಸರ್ಕಾರಿ ಕ್ವಾರಂಟೈನ್, ಉಳಿದ 12 ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.