Advertisement

51 ಜನರಿಗೆ ಕೋವಿಡ್‌ ಸೋಂಕು

03:28 PM Aug 12, 2020 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ ಮತ್ತೆ 51 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1213ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಜಿಲ್ಲೆಯ ಹಲವೆಡೆ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 24 ಮಂದಿ ಗುಣಮುಖರಾಗಿ ಮಂಗಳವಾರ ಬಿಡುಗಡೆ ಹೊಂದಿದ್ದಾರೆ.

Advertisement

ಚಿತ್ರದುರ್ಗ ತಾಲೂಕಿನಲ್ಲಿ 7, ಹೊಳಲ್ಕೆರೆ 5, ಹಿರಿಯೂರು 11, ಚಳ್ಳಕೆರೆ 21, ಹೊಸದುರ್ಗ 3 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 4 ಸೇರಿದಂತೆ ಒಟ್ಟು 51 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ಒಟ್ಟು 1125 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಇದುವರೆಗೆ 18 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೇ 577 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 617 ಸಕ್ರಿಯ ಪ್ರಕರಣಗಳಿವೆ. ಸದ್ಯ ಜಿಲ್ಲೆಯಲ್ಲಿ ಒಟ್ಟು 302 ಕಂಟೈನ್ಮೆಂಟ್‌ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 7951 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ. ಈವರೆಗೆ 25,241 ಜನರ ಮಾದರಿ ಸಂಗ್ರಹಿಸಲಾಗಿದ್ದು, 20,959 ಜನರ ವರದಿ ನೆಗೆಟಿವ್‌ ಬಂದಿದೆ. ಉಳಿದ 2769 ಜನರ ವರದಿ ಬರುವುದು ಬಾಕಿ ಇದೆ. 300ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಮೂವರು ಪೊಲೀಸರಿಗೆ ಕೋವಿಡ್‌: ಠಾಣೆ ಸೀಲ್‌ಡೌನ್‌ : ನಾಯಕನಹಟ್ಟಿ ಪಟ್ಟಣದಲ್ಲಿ ಮೂವರು ಪೊಲೀಸರಿಗೆ ಕೋವಿಡ್‌ಸೋಂಕು ತಗುಲಿದ್ದು, ಮಂಗಳವಾರ ಠಾಣೆಯನ್ನು ಸೀಲ್‌ ಡೌನ್‌ ಮಾಡಿ ಸ್ಥಳಾಂತರಿಸಲಾಗಿದೆ. ಸೋಮವಾರ ಒಬ್ಬ ಪೊಲೀಸ್‌ ಪೇದೆಗೆ, ಮಂಗಳವಾರ ಇಬ್ಬರು ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಚಳ್ಳಕೆರೆ ಹಾಗೂ ತುರುವನೂರಿನಲ್ಲಿ ನೆಲೆಸಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಹಾಗೂ ಪಟ್ಟಣದಲ್ಲಿರುವ ಒಬ್ಬ ಪೊಲೀಸರಿಗೆ ಕೋವಿಡ್‌ ಹರಡಿದೆ. ಮಂಗಳವಾರ ಠಾಣೆಯ ಎಲ್ಲ ಸಿಬ್ಬಂದಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ನಡೆಸಲಾಯಿತು. ರಾಜ್ಯ ಹೆದ್ದಾರಿಯಲ್ಲಿದ್ದ ಪೊಲೀಸ್‌ ಠಾಣೆಯನ್ನು ಮುಚ್ಚಲಾಗಿದೆ. ತೇರು ಬೀದಿಯಲ್ಲಿನ ಹಳೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರು ಕಾರ್ಯ ಆರಂಭಿಸಿದ್ದಾರೆ. ಗೌಡಗೆರೆ ಗ್ರಾಮದ ಒಬ್ಬ ವ್ಯಕ್ತಿಗೂ ಕೋವಿಡ್‌ ಸೋಂಕು ತಗುಲಿದೆ. ಈ ವ್ಯಕ್ತಿ ಅತ್ತಿಬೆಲೆಗೆ ಹೋಗಿ ಬಂದಿದ್ದ. ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಪ್ರತಿದಿನ ಮೂರು ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಮೂರು ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next