ದಿನವೂ ಬೆಳಗ್ಗೆ ಬೇಗ ಎದ್ದು 5- 6 ಗಂಟೆವರೆಗೆ ಟಿ.ವಿ. ನೋಡ್ತಾ ಯೋಗ, ವ್ಯಾಯಾಮ ಮಾಡಿ, 6- 7 ಗಂಟೆಯವರೆಗೆ ವಾಕಿಂಗ್ ಹೋಗಿ, ನಡುವೆ ಸಿಗುವ ಪರಿಚಿತರನ್ನು ಮಾತನಾಡಿಸಿ, ಕುಶಲೋಪರಿಯಲ್ಲಿ ಪಾಲ್ಗೊಂಡು, ಮನೆಗೆ ಬಂದು ಟೀ ಕುಡಿಯುವುದರ ಮೂಲಕ ಅವ್ವನ ದಿನಚರಿ ಮುಂದುವರಿಯುತ್ತಿತ್ತು.
ಆದರೀಗ ಕೋವಿಡ್ ದಿಂದಾಗಿ, ಬೇಗ ಎದ್ದು ಎಂದಿನಂತೆ ಯೋಗ ವ್ಯಾಯಾಮ ಮಾಡಿದರೂ, ಹೊರಗಿನ ವಾಕಿಂಗ್ ಇಲ್ಲವಾಗಿದೆ. ಟೆರೇಸ್ ಮೇಲೆಯೇ ವಾಕ್ ಮಾಡುತ್ತಿದ್ದಾಳೆ. ಈ ಮೊದಲಿನಂತೆ, ವಾಕಿಂಗ್ ಸಮಯದಲ್ಲಿ ಸಿಗುವ ಜನರ ಜೊತೆ ಮಾತು ಇಲ್ಲವಾಗಿದೆ. ದಿನವೂ ಭೇಟಿ ಕೊಡುತ್ತಿದ್ದ ಎರಡು ದೇವಸ್ಥಾನಗಳಿಗೆ ಹೋಗುವುದನ್ನೂ ನಿಲ್ಲಿಸಲಾಗಿದೆ. ಬೇಕಾದಾಗ ಹೊರಗೆ ಹೋಗುವ ಸ್ವಾತಂತ್ರ್ಯ ಇಲ್ಲವೇ ಇಲ್ಲ. ಗƒಹ ಬಂಧನದಲ್ಲಿ ಇಟ್ಟ ಅನುಭವ ಅವ್ವಳಿಗೆ. ಮೂರು ತಿಂಗಳಿಂದ ಜನರನ್ನು, ಮಾತುಗಳನ್ನು, ದೇವಸ್ಥಾನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ಆರಾಮಾಗಿ, ಯಾವುದೇ ಒತ್ತಡವಿಲ್ಲದೆ ಆಹ್ಲಾದಕರ ಪರಿಸರವನ್ನು ತನ್ನಷ್ಟಕ್ಕೆತಾನೇ ಅನುಭವಿಸುವ ದಿನಚರಿ ಸಂಪೂರ್ಣವಾಗಿ ನಿಂತು ಹೋಗಿದೆ.
“ಎಂಥಾ ರೋಗಗಳನ್ನ ಕಾಣುವ ಕಾಲ ಬಂತು. ಔಷಧ ಕೂಡ ಸಿಗ್ತಿಲ್ಲ. ಎಲ್ಲೂ ಹೊರಗೆ ಹೋಗೋಕೆ ಆಗುತ್ತಿಲ್ಲ. ಪ್ಲೇಗ್ ಬಗ್ಗೆ ಆಯಿ ( ಅಜ್ಜಿ) ಹೇಳ್ಳೋದ ಕೇಳಿದ್ವಿ. ಆಗ ಊರಿಗೆ ಊರೇ ಖಾಲಿ ಆಗತಿತ್ತಂತ. ಆದ್ರ ಈ ಕೋವಿಡ್, ಇಡೀ ಜಗತ್ತನ್ನ ಹಿಡದೈತಿ. ಒಂಥರಾ ಭಯದ ವಾತಾವರಣ ನಿರ್ಮಾಣ ಆಗೇತಿ. ಎಂದರ ಈ ರೋಗ ಮಾಯ ಆಗತೈತಿ ದೇವರೇ… ನೀವೆಲ್ಲ ಅನಿವಾರ್ಯ ಕೆಲಸದ ನಿಮಿತ್ತ ಹೊರಗೆ ಹೋಗುವುದು ಬಂದೈತಿ…’ ಎಂದು ನಾನು ವ್ಯಾಲ್ಯುವೇಷನ್ ಕೆಲಸಕ್ಕೆ ಹೋಗಿದ್ದನ್ನು, ಅಕ್ಕ ತನ್ನ ಶಾಲೆ, ತಮ್ಮ ಕೋರ್ಟ್ ಕೆಲಸಕ್ಕೆ ಹೋಗಿದ್ದನ್ನು ನೆನೆದು ಅವ್ವ ಆಡೊ ಮಾತುಗಳಿವು.
ಕೋವಿಡ್ ಎಲ್ಲವನ್ನೂ, ಎಲ್ಲರನ್ನೂ ಅಲುಗಾಡಿಸಿ ಬಿಟ್ಟಿದೆ. ಜೀವನ ನಾರ್ಮಲ್ ಅಂತ ಅನ್ನಿಸುತ್ತಿಲ್ಲ. ಹೊರಗೆಲ್ಲೂ ಹೋಗಲಾಗದ ಅವ್ವ ಮೊಮ್ಮಕ್ಕಳೊಂದಿಗೆ ಪಗಡೆ, ಕೇರಂ, ಕಾರ್ಡ್ಸ್, ಲುಡೊ ಆಡುತ್ತಾ ಕಾಲ ಕಳೆಯುತ್ತಿದ್ದಾಳೆ. ಮಧ್ಯೆಮಧ್ಯೆ ಮೊಮ್ಮಕ್ಕಳಿಗೆ ಏನಾದರೂ ಓದಲೋ, ಬರೆಯಲೋ ಹೇಳುತ್ತಾಳೆ. ಕಾಲಕ್ಕನುಗುಣವಾಗಿ ತನ್ನನ್ನು ಬ್ಯುಸಿ ಮಾಡಿಕೊಂಡಿದ್ದಾಳೆ. ನಾವೂ ಭಯದಲ್ಲೇ ಹೊರಗೆ ಹೋಗಿ ಬರುತ್ತಿದ್ದೇವೆ. ಬ್ಯಾಂಕ್, ಪೋಸ್ಟ್ ಆಫೀಸ್ ಎಂದು ಅತೀ ಅನಿವಾರ್ಯ ಅಂದಾಗ ಅವ್ವನನ್ನೂ ಕರೆದೊಯ್ಯಬೇಕಾಗುತ್ತದೆ. ಆಗ ಮಾಸ್ಕ್ ಮತ್ತು ಸ್ಯಾನಿಟೈಸರ್ ನಿಗಾದ ಜೊತೆಗೆ, “ಅವ್ವಾ, ಅಲ್ಲಿ ಮುಟ್ಟಬೇಡ, ಇಲ್ಲಿ ಮುಟ್ಟಬೇಡ’ ಅನ್ನೋ ನಮ್ಮ ಮಾತುಗಳಿಗೆ ಹೊಂದಿಕೊಳ್ಳಲು ಆಕೆಗೆ ಕಷ್ಟವಾದರೂ, ಅದನ್ನು ತಪ್ಪದೆ ಪಾಲಿಸುತ್ತಾಳೆ.
– ಮಾಲಾ ಮ. ಅಕ್ಕಿಶೆಟ್ಟಿ