Advertisement

3ನೇ ಅಲೆ ಇನ್ನೂ ಪ್ರವೇಶಿಸಿಲ್ಲ: ಆಸ್ಪತ್ರೆಗೆ ದಾಖಲಾತಿ ಸಂಖ್ಯೆ ಹೆಚ್ಚಾದರೆ ಆತಂಕ: ತಜ್ಞರು

02:25 AM Aug 07, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಇನ್ನೂ ಕೊರೊನಾ 3ನೇ ಅಲೆಯ ಪ್ರವೇಶವಾಗಿಲ್ಲ. ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಡೆಲ್ಟಾ ರೂಪಾಂತರಿಯಿಂದ ಶುರುವಾದ 2ನೇ ಅಲೆಯ ಮುಂದುವರಿಕೆಯೇ ಕಾರಣ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ನಾವು ಇನ್ನೂ 2ನೇ ಅಲೆಯ ಕೊನೆಯ ಹಂತದಲ್ಲಿದ್ದೇವೆ. 3ನೇ ಅಲೆ ಇನ್ನೂ ಅಪ್ಪಳಿಸಿಲ್ಲ. ಎರಡನೇ ಅಲೆಯು ಈಶಾನ್ಯ ರಾಜ್ಯಗಳಿಗೆ ವಿಳಂಬವಾಗಿ ಅಪ್ಪಳಿಸಿದೆ. ಅಲ್ಲದೇ, ಕೇರಳದಲ್ಲಿ ಸೆರೋಪಾಸಿಟಿವಿಟಿ ದರ ಕಡಿಮೆಯಿರುವ ಕಾರಣ ಸೋಂಕು ನಿಧಾನವಾಗಿ ಹಬ್ಬುತ್ತಿದೆ ಎಂದು ಸಿಎಸ್‌ ಐಆರ್‌ ನಿರ್ದೇಶಕ ಅನುರಾಗ್‌ ಅಗರ್ವಾಲ್‌ ಹೇಳಿದ್ದಾರೆ.

“ಮೂರು ವಿಚಾರಗಳು 3ನೇ ಅಲೆ ಬಂದಿರುವುದರ ಸುಳಿವು ನೀಡುತ್ತವೆ. ಅವೆಂದರೆ, ಪ್ರಕರಣಗಳ ಸಂಖ್ಯೆ, ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ. ಯಾವಾಗ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೆಚ್ಚಾಗುತ್ತದೋ ಆಗ 3ನೇ ಅಲೆ ಬಂದಿದೆ ಎಂದರ್ಥ’ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಕೆ. ಶ್ರೀನಾಥ್‌ ರೆಡ್ಡಿ ಹೇಳಿದ್ದಾರೆ.

ಗುರುವಾರದಿಂದ ಶುಕ್ರವಾರಕ್ಕೆ ದೇಶಾದ್ಯಂತ 44,643 ಮಂದಿಗೆ ಸೋಂಕು ದೃಢಪಟ್ಟಿದ್ದು, 464 ಮಂದಿ ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 19,948 ಮಂದಿಗೆ ಸೋಂಕು ದೃಢಪಟ್ಟಿದ್ದು, 187 ಮಂದಿ ಮೃತಪಟ್ಟಿದ್ದಾರೆ.

ಚೀನದಲ್ಲಿ ಏರುತ್ತಿದೆ ಸೋಂಕು: ಚೀನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಶುಕ್ರವಾರ 124 ಹೊಸ ಪ್ರಕರಣ ಪತ್ತೆಯಾಗಿವೆ. ಅಮೆರಿಕದಲ್ಲೂ ಕಳೆದ 6 ತಿಂಗಳಲ್ಲೇ ಅತ್ಯಧಿಕ ಪ್ರಕರಣ ಗುರುವಾರ ವರದಿಯಾಗಿದೆ. ಒಂದು ವಾರದಲ್ಲಿ ಸರಾಸರಿ 94,819ರಷ್ಟು ಮಂದಿಗೆ ಸೋಂಕು ದೃಢಪಡುತ್ತಿದೆ.

Advertisement

50 ಕೋಟಿ ಡೋಸ್‌ ನೀಡಿಕೆ
ದೇಶದಲ್ಲಿ 50 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ತಿಳಿಸಿದ್ದಾರೆ. ಶುಕ್ರವಾರ ಒಂದೇ ದಿನ 43.29 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. 18-44 ವಯೋಮಿತಿಯ 22,93,781 ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. 4,32,281 ಮಂದಿಗೆ ಎರಡನೇ ಡೋಸ್‌ ನೀಡಲಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಒಟ್ಟಾರೆಯಾಗಿ 18-44 ವಯೋ ಮಿತಿಯ 17.23 ಕೋಟಿ ಮಂದಿಗೆ ಮೊದಲ ಡೋಸ್‌, 1.12 ಕೋಟಿ 2ನೇ ಡೋಸ್‌ ಲಸಿಕೆ ನೀಡಲಾಗಿದೆ.

ಲಸಿಕೆ ಪ್ರೂಫ್ಗೆ ಟೀಕೆ
ಅಂಗಡಿಗೆ ಹೋಗುವುದಿದ್ದರೂ ಲಸಿಕೆ ಪಡೆದಿರುವ ದಾಖಲೆ ಅಥವಾ ಕೊರೊನಾ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿರುವ ಕೇರಳ ಸರಕಾರದ ನಿರ್ಧಾರಕ್ಕೆ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಈ ರೀತಿಯ ನಿಯಮಗಳಿಂದಾಗಿ, ಪೊಲೀಸರ ಅತಿರೇಕದ ವರ್ತನೆಗೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಅಸೆಂಬ್ಲಿಯಲ್ಲಿ ವಿಪಕ್ಷಗಳು ಕಿಡಿಕಾರಿವೆ. ಆದರೆ, ನಿರ್ಧಾರವನ್ನು ಸರಕಾರ ಸಮರ್ಥಿಸಿಕೊಂಡಿದೆ.

ನೆಗೆಟಿವ್‌ ರಿಪೋರ್ಟ್‌ ಬೇಕಿಲ್ಲ: ಯಾರು ಕೊರೊನಾದ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೋ, ಅಂಥವರಿಗೆ ಪ್ರಯಾಣದ ವೇಳೆ ಆರ್‌ ಟಿಪಿಸಿಆರ್‌ ನೆಗೆಟಿವ್‌ ವರದಿ ಅಗತ್ಯವಿಲ್ಲ ಎಂದು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಅಗತ್ಯ ಇರುವಲ್ಲಿ ಮಾತ್ರವೇ ಆರ್‌ ಟಿಪಿಸಿಆರ್‌ ಪರೀಕ್ಷೆ ನಡೆಸಿದರೆ ಸಾಕು. ಪ್ರಯಾಣದ ಉದ್ದೇಶಕ್ಕೆ ಎರಡೂ ಡೋಸ್‌ ಲಸಿಕೆ ಪಡೆದ ಪ್ರಮಾಣ ಪತ್ರ ಇದ್ದರೆ ಸಾಲುತ್ತದೆ ಎಂದು ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಎನ್‌.ಕೆ. ಅರೋರಾ ಹೇಳಿದ್ದಾರೆ.

2022ರಲ್ಲಿ ಮಕ್ಕಳಿಗೆ ಕೊವೊವ್ಯಾಕ್ಸ್‌ ಲಸಿಕೆ
ಸೀರಂ ಇನ್‌ಸ್ಟಿಟ್ಯೂಟ್‌ ಸಿಇಒ ಅಡಾರ್‌ ಪೂನಾವಾಲ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮ ಕಂಪೆನಿ ಉತ್ಪಾದಿಸುತ್ತಿರುವ ಕೊವೊವ್ಯಾಕ್ಸ್‌ ಲಸಿಕೆಯು (ವಯಸ್ಕರಿಗೆ) ಅಕ್ಟೋಬರ್‌ ವೇಳೆಗೆ ಲಭ್ಯವಾಗಲಿದ್ದು, ಮಕ್ಕಳ ಲಸಿಕೆ 2022ರ ಎಪ್ರಿಲ್‌-ಜೂನ್‌ ಅವಧಿಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ನೊವೊವ್ಯಾಕ್ಸ್‌ ಕಂಪೆನಿಯು ಭಾರತದಲ್ಲಿ ಕೊವೊವ್ಯಾಕ್ಸ್‌ಗೆ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next