Advertisement

ಕೋವಿಡ್: ಹಿರಿಯರಿಗೆ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯ

05:07 PM Oct 02, 2020 | Suhan S |

ಬೆಳಗಾವಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ 92 ವರ್ಷದ ವೃದ್ಧರೊಬ್ಬರು ಕೋವಿಡ್ ಮಹಾಮಾರಿ ಸೊಂಕಿನಿಂದ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದರು. ಸಂಪೂರ್ಣ ಗುಣಮುಖರಾದ ವೃದ್ಧರನ್ನು ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ.ವಿ. ಜಾಲಿ ಬೀಳ್ಕೊಟ್ಟರು.

Advertisement

ನಂತರ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ವಯಸ್ಸಾದ ವ್ಯಕ್ತಿಗಳ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತಿದ್ದು, ಅವರ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಕೇವಲ ಆರೋಗ್ಯ ಮಾತ್ರವಲ್ಲ, ಅವರ ಹಕ್ಕುಗಳು ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಅನೇಕ ಕ್ರಮಗಳನ್ನು ಕೈಕೊಂಡಿದೆ ಎಂದರು.

ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಪ್ರಾದೇಶಿಕ ಮತ್ತು ದೇಶದಲ್ಲಿ ಅವರ ಅಗತ್ಯತೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿ, ರೋಗ ಹರಡುವ ಮತ್ತು ಅವರು ಎದುರಿಸುತ್ತಿರುವ ಅಪಾಯಗಳನ್ನು ಪರಿಗಣಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಕೋವಿಡ್‌ ಸೊಂಕಿನಿಂದ ಗುಣಮುಖರಾದ ಹಿರಿಯ ಜೀವಗಳಿಗೆ ಧೆ„ರ್ಯ ತುಂಬುತ್ತ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇವಲ ಜಾಗೃತಗೊಂಡರೆ ಸಾಲದು ಆಚರಣೆ ಕಾರ್ಯರೂಪದಲ್ಲಿರಬೇಕು ಎಂದು ಸಲಹೆ ನೀಡಿದರು.

ಹಿರಿಯ ನಾಗರೀಕರು ತಮ್ಮ ಹಕ್ಕುಗಳಿಗೆ ಚ್ಯುತಿ ಉಂಟಾದಾಗ ಮತ್ತು ಆರೋಗ್ಯ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಜೀವನ ಸಾಗಿಸಬೇಕು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಿರಿಯ ನಾಗರೀಕರ ಸಂಖ್ಯೆಯು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. 65 ವರ್ಷಕ್ಕೂ ಮೇಲ್ಪಟ್ಟ ಜನರ ಸಂಖ್ಯೆ 37 ಮಿಲಿಯನ್‌ ದಿಂದ 2050 ಕ್ಕೆ 120 ಮಿಲಿಯನ್‌ ಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ ಬಂದೆರುಗುವ ಸಾಂಕ್ರಾಮಿಕ ರೋಗದ ಜೊತೆಗೆ ನಾವು ಹೋರಾಡುತ್ತ, ನಮ್ಮಲ್ಲಿರುವ ಕಾಯಿಲೆಗಳನ್ನು ಎದುರಿಸುವಲ್ಲಿ ಸಶಕ್ತರಾಗಬೇಕಾಗಿದೆ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಪ್ರಭಾಕರ ಕೋರೆ ಅವರ ಮಾರ್ಗದರ್ಶನದಂತೆ ಕೆಎಲ್‌ಇ ಹೆಲ್ಪ ಘಟಕವನ್ನು ಸ್ಥಾಪಿಸಲಾಗಿದೆ. ಡಾ. ನಯನಾ ಜೋಷಿ ಹಾಗೂ ಡಾ. ಜೀವನ ದೋಶಿ ಅವರು ತಪಾಸಣೆ ಮಾಡಿ ಸಲಹೆ ನೀಡಲಿದ್ದಾರೆ. ನವದೆಹಲಿಯ ಜಿರಿಯಾಟ್ರಿಕ್‌ ಸೊಸೈಟಿ ಆಫ್‌ ಇಂಡಿಯಾ ಮೂರು ತಿಂಗಳ ಜಿರಿಯಾಟ್ರಿಕ್‌ ಆ್ಯಂಡ್‌ ಜಿರೊನಾಟಾಲಾಜಿ ಕೋರ್ಸ ಪ್ರಾರಂಭಿಸಿದೆ ಎಂದು ಹೇಳಿದರು.

Advertisement

ಕೊವಿಡ್‌ ಕೇರ್‌ ತಂಡದ ಡಾ. ಮಾಧವ ಪ್ರಭು ಮಾತನಾಡಿ, ಕೆಎಲ್‌ಇ ಆಸ್ಪತ್ರೆಯಲ್ಲಿ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಟೊಸೊರ್ಬ, ಕೊನ್ವಲೆಸೆಂಟ ಪ್ಲಾಸ್ಮಾ ಹಾಗೂ ಥೆರಪಿಟಿಕ್‌ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 1450ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಶೇ. 76 ಕ್ಕೂ ಅಧಿಕ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ|ಜಿ.ಎಸ್‌. ಗಾವಡೆ, ಡಾ| ರಾಜೇಶ ಪವಾರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next