ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆರೋಗ್ಯ ಬಿಕ್ಕಟ್ಟಿಗೆ ತಳ್ಳಿದೆ. ಆದರೆ ಪ್ರಕೃತಿಯ ದೃಷ್ಟಿಯಿಂದ ಇದು ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿದೆ ಎಂದು ಹೇಳಲಾಗುತ್ತಿದೆ. ಇದು ಮಾನವ ಹಸ್ತಕ್ಷೇಪ ಕಡಿಮೆಯಾದ ಕಾರಣ ಪ್ರಕೃತಿಯ ಸೌಂದರ್ಯವು ಸುಧಾರಿಸಿದೆ ಎಂದು ಅಧ್ಯಯನವೊಂದು ಹೇಳಿದೆ.
2020ರಲ್ಲಿ ಭೂಮಿಯ ಸಂಪನ್ಮೂಲಗಳ ಬಳಕೆ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಕಡಿಮೆಯಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ಕೋವಿಡ್ ಎಂದು ಸಂಶೋಧಕರು ಶನಿವಾರ ಬಿಡುಗಡೆ ಮಾಡಿರುವ ಡೇಟಾದಲ್ಲಿ ಉಲ್ಲೇಖೀಸಿದ್ದಾರೆ.
ಜಾಗತಿಕ “ಅರ್ಥ್ ಓವರ್ಶೂಟ್ ಡೇ’ ಸಂದರ್ಭದಲ್ಲಿ ಬಿಡುಗಡೆಯಾದ ವರದಿಯಲ್ಲಿ 1970ರಿಂದ “ಅರ್ಥ್ ಓವರ್ಶೂಟ್ ಡೇ’ ಸ್ಥಿರವಾಗಿ ಮುಂದುವರಿಯುತ್ತಿದೆ. ಆದರೆ ಈ ವರ್ಷ ಅದು ಸೆಪ್ಟೆಂಬರ್ 22ರಂದು ನಡೆದಿತ್ತು. ಕಳೆದ ವರ್ಷ, ಭೂಮಿಯ ಓವರ್ಶೂಟ್ ದಿನ ಜುಲೈ 29ರಂದು ನಡೆದಿತ್ತು. ಏಕೆಂದರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಈ ಬಾರಿ ಕಡಿಮೆಯಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಮಾನವನ ಹೆಜ್ಜೆ ಗುರುತುಗಳಲ್ಲಿ ಶೇ. 9.3ರಷ್ಟು ಕುಸಿತ ಕಂಡುಬಂದಿದೆ. ಆದಾಗ್ಯೂ ಈ ಅಂಕಿ-ಅಂಶಗಳನ್ನು ಆಚರಿಸುವಂತೆ ಏನೂ ಇಲ್ಲ ಎಂದು ಜಾಗತಿಕ ಹೆಜ್ಜೆ ಗುರುತು ಜಾಲದ ಅಧ್ಯಕ್ಷ ಮ್ಯಾಥಿಸ್ ವೇಕರ್ನಾಗಲ್ ಹೇಳಿದ್ದಾರೆ. ಏಕೆಂದರೆ ಮಾನವ ಪ್ರಯತ್ನಗಳಿಂದ ಇದು ಸಾಧ್ಯವಾಗಿಲ್ಲ. ವಿಪತ್ತಿನ ಕಾರಣದಿಂದ ಇದು ಸಾಧ್ಯವಾಗಿದೆ. ವಿಶೇಷವೆಂದರೆ ವಿಶ್ವಾದ್ಯಂತ ಕೋವಿಡ್‌ನಿಂದ ಸುಮಾರು 800,000 ಜನರು ಸಾವನ್ನಪ್ಪಿದ್ದಾರೆ. ಈ ವರ್ಷದ ಆರಂಭದಲ್ಲಿ ಅನೇಕ ದೇಶಗಳಲ್ಲಿ ವೈರಸ್ ಎದುರಿಸಲು ಲಾಕ್‌ಡೌನಂತಹ ಕಠಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಪರಿಣಾಮವಾಗಿ ಕೈಗಾರಿಕಾ ಚಟುವಟಿಕೆಗಳು ಕಡಿಮೆಯಾಗಿ ವಾಹನ ಮಾಲಿನ್ಯ ಕಡಿಮೆಯಾಗಿದೆ.