Advertisement

ಕೋವಿಡ್‌ ಪರೀಕ್ಷಾ ಕೇಂದ್ರ ಶೀಘ್ರ ಆರಂಭ

06:57 AM May 27, 2020 | Suhan S |

ಬೀದರ: ಬೀದರನಲ್ಲೇ ಕೋವಿಡ್ ವೈರಾಣು ಪರೀಕ್ಷಾ ಕೇಂದ್ರ ಪ್ರಾರಂಭಿಸುವ ಎಲ್ಲ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರ ಜನಸೇವೆಗೆ ಲಭ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.

Advertisement

ಈ ಹಿಂದೆಯೇ ತಿಳಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಬ್ರಿಮ್ಸ್‌ ನಿರ್ದೇಶಕರು ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಂಬಂಧಿಸಿದ ಕೆಲವು ಉಪಕರಣಗಳು ಬಂದಿವೆ. ಇನ್ನೂ ಕೆಲವು ವಾರದೊಳಗೆ ಬರಲಿವೆ. ಸಂಬಂಧಿಸಿದ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದಕ್ಕೆ ಅವಶ್ಯವಿರುವ ಎಲ್ಲದಕ್ಕೂ ವ್ಯವಸ್ಥೆ ಮಾಡಲಾಗುತ್ತಿದ್ದು, ಶೇ.90ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬೀದರನಲ್ಲಿ ಪರೀಕ್ಷಾ ಕೇಂದ್ರ ಆರಂಭವಾದಲ್ಲಿ ಬೆಂಗಳೂರು ಮತ್ತು ಕಲಬುರಗಿ ಹಾಗೂ ಇನ್ನಿತರ ಕಡೆಗೆ ಸ್ಯಾಂಪಲ್‌ ಕಳಿಸುವುದು ತಪ್ಪಲಿದೆ. ಮತ್ತು ರೋಗಿಗಳ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸುವುದು ತೀವ್ರವಾಗಲಿದೆ. ಪರೀಕ್ಷಾ ವರದಿ ಬೇಗನೇ ಕೈಗೆ ಸಿಗುವುದರಿಂದ ಪಾಸಿಟಿವ್‌ ಬಂದ ರೋಗಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಕೂಡ ಬೇಗನೆ ನಡೆದು ವೈರಾಣು ಇತರರಿಗೆ ಹರಡುವುದನ್ನು ತಡೆಯಬಹುದಾಗಿದೆ ಎಂದಿದ್ದಾರೆ.

ಸಿಎಂ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ತಮ್ಮ ಮನವಿಗೆ ಸ್ಪಂದಿಸಿ ಪರೀಕ್ಷಾ ಕೇಂದ್ರ ತೆರೆಯಲು ಅವಕಾಶ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next