Advertisement

Covid: ಜ್ವರ ಲಕ್ಷಣ ಇರುವ ಹಿರಿಯರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

11:15 PM Jan 05, 2024 | Pranav MS |

ಬೆಂಗಳೂರು: ಎಲ್ಲ ಐಎಲ್‌ಐ (ಇನ್‌ಫ್ಲುಯನ್ಸಾ ಲೈಕ್‌ ಇಲ್‌ನೆಸ್‌), ಶ್ವಾಸಕೋಶದ ಸೋಂಕು (ಸಾರಿ) ಪ್ರಕರಣಗಳಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯಗೊಳಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಕೋವಿಡ್‌ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಶುಕ್ರವಾರ ಸಭೆ ನಡೆಸಿದ ಅವರು, ರಾಜ್ಯದಲ್ಲಿ 1,250ಕ್ಕೂ ಅಧಿಕ ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು, ಶೇ.3.82ರಷ್ಟು ಪಾಸಿಟಿವಿಟಿ ದರ ಇದೆ. ನಿತ್ಯ ಕನಿಷ್ಠ 5 ಸಾವಿರ ಪರೀಕ್ಷೆ ನಡೆಸಲು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ್ದು, ಪ್ರಸ್ತುತ 7 ಸಾವಿರಕ್ಕೂ ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಪಾಸಿಟಿವಿಟಿ ದರವೂ ಹೆಚ್ಚಿದೆ. ಸರಕಾರ ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ ಎಂದರು.

ಈ ಮೊದಲು ಪ್ರತಿ 20 ಐಎಲ್‌ಐ ಪ್ರಕರಣಗಳಲ್ಲಿ 1ನ್ನು ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಇನ್ನು ಮುಂದೆ 60 ವರ್ಷ ಮೇಲ್ಪಟ್ಟ ಯಾರಲ್ಲೇ ಐಎಲ್‌ಐ, ಸಾರಿ ಲಕ್ಷಣಗಳು ಕಂಡುಬಂದರೆ ಅವರೆಲ್ಲರ ಗಂಟಲದ್ರವ (ಸ್ವಾéಬ್‌) ಸಹಿತ ಇತರ ಮಾದರಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮನೆಗಳಲ್ಲಿ ಪ್ರತ್ಯೇಕ ನಿಗಾದಲ್ಲಿರು ವವರ ಮೇಲೆ ಆರೋಗ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದು, ಸಹವರ್ತಿ ಕಾಯಿಲೆ ಇರುವವರು ಕೂಡ ಕೋವಿಡ್‌ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ವಾರಕ್ಕೊಮ್ಮೆ ಡೆತ್‌ ಆಡಿಟ್‌ ವರದಿ
ಕೋವಿಡ್‌ ಡೆತ್‌ ಆಡಿಟ್‌ ಮಾಡಲು ಡಾ| ಶಶಿಭೂಷಣ್‌ ಅಧ್ಯಕ್ಷತೆಯ ಸಮಿತಿ ರಚಿಸಿದ್ದು, 20 ಸಾವು ಪ್ರಕರಣಗಳ ಪೈಕಿ 10 ಪ್ರಕರಣಗಳ ವರದಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ 1 ಪ್ರಕರಣವು ಕೋವಿಡ್‌ನಿಂದಲೇ ಮೃತಪಟ್ಟಿರುವ ಪ್ರಕರಣವಾಗಿದ್ದು, ಉಳಿದ 9ರ‌ಲ್ಲಿ ಮೃತಪಟ್ಟ ವರಿಗೆ ಅನ್ಯ ಕಾಯಿಲೆಗಳೊಂದಿಗೆ ಕೋವಿಡ್‌ ಕೂಡ ಇತ್ತು. ಇನ್ನುಳಿದ 10 ಪ್ರಕರಣಗಳ ಆಡಿಟ್‌ ರಿಪೋರ್ಟ್‌ ಕೂಡ ಬೇಗನೆ ಕೊಡಬೇಕು ಮತ್ತು ಇನ್ನು ಮುಂದೆ ಡೆತ್‌ ಆಡಿಟ್‌ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

300 ಗಡಿ ದಾಟಿ ಪಾಸಿಟಿವ್‌ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 328 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢವಾಗಿದ್ದು, 409 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯವ್ಯಾಪಿ ಒಟ್ಟು 1,159 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 1,087 ಮಂದಿ ಹೋಮ್‌ ಐಸೊಲೇಶನ್‌, 72 ಸೋಂಕಿತರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರ ದಲ್ಲಿ 163 ಪಾಸಿಟಿವ್‌ ವರದಿಯಾಗಿದ್ದು, ಉಳಿದೆಲ್ಲ ಜಿಲ್ಲೆಯಲ್ಲಿ 1ರಿಂದ ಎರಡು ಅಂಕೆಯ ಪ್ರಕರಣಗಳು ದಾಖಲಾಗಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.

Advertisement

ಇಂದಿನಿಂದ ಕೋವಿಡ್‌ ಸಹಾಯವಾಣಿ
ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ ಕೆಲವು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ವೈದ್ಯಕೀಯ ತಾಂತ್ರಿಕ ವಿಚಾರಗಳಿಗೆ ಸಂಬಂಧಿಸಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ| ರವಿ ಅವರನ್ನು ಹೊರತುಪಡಿಸಿ ಬೇರಾರೂ ಮಾಹಿತಿ ಕೊಡುವಂತಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಕೋವಿಡ್‌ ವಿಚಾರವಾಗಿ ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್‌ ಪಾಟೀಲ್‌ ಹಾಗೂ ನಾನು ಮಾಹಿತಿ ಹಂಚಿಕೊಳ್ಳುವುದು ಮಾತ್ರ ಅಧಿಕೃತವಾಗಿರಲಿದೆ. ಕೋವಿಡ್‌ ನಿರ್ವಹಣೆ ಸಂಬಂಧ ಸಹಾಯವಾಣಿಯೊಂದನ್ನು ಸ್ಥಾಪಿಸಿದ್ದು, ಶನಿವಾರ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಹೆಚ್ಚು ಹೆಚ್ಚು ಪರೀಕ್ಷೆ ನಡೆಸುತ್ತಿರುವುದರಿಂದ ಕೋವಿಡ್‌ ಪಾಸಿಟಿವಿಟಿ ರೇಟ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಆದರೆ ಡೆತ್‌ ಆಡಿಟ್‌ ವರದಿ ಪ್ರಕಾರ 20ರಲ್ಲಿ 1 ಮಾತ್ರ ಕೋವಿಡ್‌ನಿಂದ ಮೃತಪಟ್ಟಿದ್ದು, 9 ಪ್ರಕರಣಗಳಲ್ಲಿ ಅನ್ಯಕಾಯಿಲೆಗಳ ಜತೆ ಕೋವಿಡ್‌ ಸಹ ಇತ್ತು. ನಾವು ತರಿಸಿರುವ 30 ಸಾವಿರ ಲಸಿಕೆಗಳ ಪೈಕಿ ಮೈಸೂರು, ಬೆಂಗಳೂರಿನಲ್ಲಿ ಕೆಲವರು ಮಾತ್ರ ಪಡೆದಿದ್ದು, ಅಗತ್ಯವಿರುವವರು ಲಸಿಕೆ ಪಡೆಯಬಹುದಾಗಿದೆ.
-ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next