ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಲ್ಕನೇ ಅಲೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸಾಕು ಹಾಗೂ ಮೃಗಾಲಯದ ಪ್ರಾಣಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಹಾಗೂ ಕಣ್ಗಾವಲಿಡಲು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ತಜ್ಞರ ಸಮಿತಿ ಸಲಹೆ ನೀಡಿದೆ.
ಕೆಲ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಜತೆಗೆ ರಾಜ್ಯದಲ್ಲೂ ಸೋಂಕಿತರ ಸಂಖ್ಯೆ 200 ಸಮೀಪಿಸಿದೆ. ಈ ಹಿನ್ನೆಲೆಯಲ್ಲಿ 4ನೇ ಅಲೆಯ ಮುನ್ನೆಚ್ಚರಿಕೆ ಕ್ರಮವಾಗಿ ಏ.26ರಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು ನಡೆಸಿದ ಸಭೆಯಲ್ಲಿ ಪ್ರಾಣಿಗಳನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಿ, ಅವುಗಳೂ ಸೋಂಕಿಗೆ ತುತ್ತಾಗುತ್ತಿದೆಯೇ ಎನ್ನುವುದನ್ನು ಖಚಿತ ಪಡಿಸಲು ಸಲಹೆ ನೀಡಿದ್ದಾರೆ.
ಸಾಕು ಪ್ರಾಣಿಗೆ ಮೊದಲ ಆದ್ಯತೆ: ಕೊರೊನಾ ಸೋಂಕಿತ ವ್ಯಕ್ತಿಯ ಮನೆಯಲ್ಲಿನ ನಾಯಿ, ಬೆಕ್ಕುಗಳನ್ನು ಮೊದಲ ಆದ್ಯತೆಯ ಮೇರೆಗೆ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಸಾಕು ಪ್ರಾಣಿಗಳನ್ನು ಹೊರತು ಪಡಿಸಿ ಹೆಚ್ಚಾಗಿ ಮನುಷ್ಯ ಸಂಪರ್ಕಕ್ಕೆ ಬರುವ ಮೃಗಾಲಯ ಪ್ರಾಣಿಗಳ ಮೇಲೆ ಕಣ್ಗಾವಲು ಇರಿಸಲು ಕೋವಿಡ್ ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುವ ಹಾಗೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸಲಹೆ ನೀಡಲಿದ್ದಾರೆ.
ಜಿಲ್ಲೆಯಲ್ಲೂ ಪರೀಕ್ಷೆ: ಪ್ರಾಣಿಗಳಲ್ಲಿ ಕೋವಿಡ್ ಕಣ್ಗಾವಲು ಪಶುವೈದ್ಯಕೀಯ ಇಲಾಖೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ ನ ಸಮನ್ವಯದಲ್ಲಿ ನಡೆಯಬೇಕಾಗಿದ್ದು, ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಂಗಳೂರು ಒಂದರಲ್ಲಿ 1.50ಲಕ್ಷ ಸಾಕು ನಾಯಿಗಳಿವೆ. ಅನುಮೋದನೆ ದೊರಕಿದ ತಕ್ಷಣ ಜಿಲ್ಲಾ ಮಟ್ಟದಲ್ಲಿ ಆಯಾ ಪರೀಕ್ಷೆಗಳು ನಡೆಯಲಿದೆ.
ಥೈಲ್ಯಾಂಡ್‌ನಲ್ಲಿ ಪಾಸಿಟಿವ್: ಥೈಲ್ಯಾಂಡಿನ ಖಾಸಗಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕೊರೊನಾ ಕ್ವಾರಂಟೈನ್ ಸಮಯದಲ್ಲಿ ಪಶು ವೈದ್ಯರು ನಾಯಿ ಹಾಗೂ ಬೆಕ್ಕುಗಳಲ್ಲಿ ಸೋಂ ಕು ಪರೀಕ್ಷೆ ಮಾಡಿದ್ದಾರೆ. 2019ರಿಂದ 2021ರ ಅಂತ್ಯದ ವರೆಗೆ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯ ಮನೆಯ ಸಾಕು ಪ್ರಾಣಿ ಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸ ಲಾಗಿತ್ತು. ಅದರಲ್ಲಿ ಪ್ರತಿ 35ನಾಯಿಗಳಲ್ಲಿ ಮೂರು ನಾಯಿ ಹಾಗೂ 9 ಬೆಕ್ಕುಗಳಲ್ಲಿ ಒಂದರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಚೆನ್ನೈ ಹಾಗೂ ಹೈದ್ರಾಬಾದ್ ಮೃಗಾಲಯದಲ್ಲಿನ ಪ್ರಾಣಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದಾಗ ಅವುಗಳಲ್ಲಿ ಪಾಸಿಟಿವ್ ವರದಿಯಾಗಿತ್ತು. ಪ್ರಾಣಿಗಳ ಆರೋಗ್ಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿ ಪಾಸಿಟಿವ್ ಬಂದ ಪ್ರಾಣಿಗೆ ಸೋಂಕು ಯಾರ ಮೂಲಕ ಬಂತು, ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮನುಷ್ಯನಿಗೆ ಹರಡುವ ಸಾಧ್ಯತೆಗಳಿವೆ ಎನ್ನುವ ಅಧ್ಯಯನವಾಗಬೇಕಿದೆ. ಇದಕ್ಕೆ ಅನುಮೋದನೆ ಸಿಕ್ಕರೆ ಹೋಬಳಿ ಮಟ್ಟದ ಪಶುವೈದ್ಯರ ಮೂಲಕ ಪರೀಕ್ಷೆ ನಡೆಸ ಬಹುದಾಗಿದೆ ಎಂದು ಪಶುವೈದ್ಯಾಧಿಕಾರಿ ತಿಳಿಸಿದರು.
ಪ್ರಸ್ತುತ ಸಲಹಾ ಸಮಿತಿ ಸಾಕು ಪ್ರಾಣಿಗಳು ಹಾಗೂ ಮೃಗಾಲಯದ ಪ್ರಾಣಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಹಾಗೂ ಕಣ್ಗಾವಲಿಡಲು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದ್ದು, ಇದು ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ.
-ಡಾ. ರಂದೀಪ್, ಆಯುಕ್ತರು, ಆರೋಗ್ಯ ಇಲಾಖೆ
ನೆರೆ ರಾಜ್ಯದ ಮೃಗಾಲಯದಲ್ಲಿನ ಪ್ರಾಣಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿ ಅಧ್ಯಯನ ನಡೆಸುವುದು ಉತ್ತಮ. ಸೋಂಕಿತರ ನಿಕಟ ಸಂಪರ್ಕದಲ್ಲಿರುವ ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುವ ಸಾಕು ನಾಯಿ ಮತ್ತು ಬೆಕ್ಕಿನಿಂದ ಸೋಂಕಿರುವ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಬೇಕು.
-ಡಾ. ಪ್ರಯಾಗ್, ಮುಖ್ಯ ಪಶುವೈದ್ಯಾಧಿಕಾರಿ.
ಮನುಷ್ಯನಿಂದ ಪ್ರಾಣಿಗಳಿಂದ ಸೋಂಕು ಹರಡಲು ಸಾಧ್ಯವಿಲ್ಲ. ಇದಕ್ಕೆ ಭಯ ಪಡುವ ಅಗತ್ಯವೂ ಇಲ್ಲ. ಪ್ರಾಣಿಗಳಲ್ಲಿ ಇದುವರೆಗೆ ಕೋವಿಡ್ ಸೋಂಕು ಪತ್ತೆಯಾಗಿರುವುದು ವರದಿಯಾಗಿಲ್ಲ
. -ಅರುಣ್ ಪ್ರಸಾದ್, ಪ್ರಾಣಿ ಪ್ರೇಮಿ
-ತೃಪ್ತಿ ಕುಮ್ರಗೋಡು