ಹಾಸನ: ಕಳೆದ 3 ದಿನಗಳಿಂದ ಕೋವಿಡ್ ಪರೀಕ್ಷೆಯ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಗುರಿ ಪೂರ್ಣಗೊಳಿಸುವುದರ ಜತೆಗೆ ಹೋಂ ಐಸೋಲೇಷನ್‌ನಲ್ಲಿರುವವರು ಸೇರಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಹೆಚ್ಚು ಪತ್ತೆಹಚ್ಚಿ ಅವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು. ಅಧಿಕಾರಿಗಳಿಗೆನಿರ್ದೇಶನ:ಹೋಂ ಐಸೋಲೇ ಷನ್‌ನಲ್ಲಿರುವ ಸೋಂಕಿತರ ಮನೆಗೆ ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು , ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.
ಸ್ವಾಬ್ ಪರೀಕ್ಷೆ ಕಡ್ಡಾಯವಾಗಿ ಮಾಡಿ: ತಾಲೂಕುಗಳಿಗೆ ಈಗಾಗಲೇ 20 ಮಂದಿ ಸ್ವಾಬ್ ಕಲೆಕ್ಟರ್ ಗಳನ್ನು ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ. ಅವರ ಮೂಲಕ ಹೆಚ್ಚು ಸ್ವಾಬ್ ಟೆಸ್ಟ್ ಮಾಡಿಸಿ ಗುರಿ ಸಾಧಿಸಬೇಕು. ಪ್ರತಿ ತಾಲೂಕಿಗೂ ಅಗತ್ಯವಿರುವ ಸ್ವಾಬ್ ಕಲೆಕ್ಟರ್‌ಗಳನ್ನು ಅರ್ಜಿ ಮೂಲಕ ಆಹ್ವಾನಿಸಿ ವಿಜ್ಞಾನ ಪದವೀಧರರು, ನರ್ಸಿಂಗ್ ತರಬೇತಿ ಪಡೆದವರನ್ನು ಹಾಗೂ ಸ್ಟಾಫ್ ನರ್ಸ್ ಗಳನ್ನು ನೇಮಕ ಮಾಡಿಕೊಳ್ಳಿ. ಅವರು ಕಾರ್ಯ ನಿರ್ವಹಿಸುವ ನರ್ಸಿಂಗ್ ಹೋಂ ಗಳಲ್ಲಿಯೇ ಸ್ವಾಬ್ ಪರೀಕ್ಷೆ ಮಾಡಲು ಸೂಚಿಸಿ ಎಂದರು.
ಪರೀಕ್ಷೆಗೆ ಪ್ರೇರೇಪಿಸಲು ಸಲಹೆ:ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ಗಳ ವರದಿಯನ್ನು ಪ್ರತಿನಿತ್ಯ ಪಡೆದು ತಾಲೂಕು ಆರೋಗ್ಯ ಅಧಿಕಾರಿಗಳು ಸಂಬಂಧಿಸಿದ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಸಾರ್ವಜನಿಕರಿಗೆ ಕೋವಿಡ್ ನಿಯಂತ್ರಣದ ಜಾಗೃತಿ ಮೂಡಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಹೇಳಿದರು.
ಕ್ರಮ ಕೈಗೊಳ್ಳಿ: ಜಿಪಂ ಸಿಇಒ ಬಿ.ಎ.ಪರಮೇಶ್ ಮಾತನಾಡಿ, ಗ್ರಾಪಂ ಕಚೇರಿಗೆ ಬರುವ ಜನರನ್ನು ಪರೀಕ್ಷೆ ಮಾಡಿಸಿಕೊಳ್ಳಲು ಪ್ರೇರೇಪಿಸಬೇಕು. ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಂಯೋಜಕರಿಗೆ ನಿರ್ದಿಷ್ಟ ಗುರಿ ನೀಡಿ ಸಂಘದ ಸದಸ್ಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿಗಳಾದ ಬಿ.ಎ. ಜಗದೀಶ್, ಗಿರೀಶ್ ನಂದನ್,ತಹಶೀಲ್ದಾರರು, ತಾಪಂ ಇಒಗಳು, ತಾಲೂಕು ವೈದ್ಯಾಧಿಕಾರಿಗಳು ಇದ್ದರು.