ಬರಗೂರು: ಶಿರಾ ಉಪ ಚುನಾವಣೆಯಲ್ಲಿ ಗುಂಪು ಗುಂಪಾಗಿ ಜನರು ಸೇರುತ್ತಿದ್ದನ್ನು ಗಮನಿಸಿದ ಸರ್ಕಾರ ಕೋವಿಡ್ ಸೋಂಕು ರೋಗ ತಡೆಗಟ್ಟು ನಿಟ್ಟಿನಲ್ಲಿ ಉಚಿತವಾಗಿ ಪ್ರತಿಹಳ್ಳಿಗಳಿಗೂ ತೆರಳಿ ಸ್ಥಳದಲ್ಲೇ ರ್‍ಯಾಂಡಮ್ ಪರೀಕ್ಷೆ ನಡೆಸಿ ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಮುಂದಾಗಿದ್ದು ಸಾರ್ವಜನಿಕರು ಕೋವಿಡ್ ರೋಗವನ್ನು ತಡೆಗಟ್ಟಲು ಸಹಕರಿಸುವಂತೆ ವೈದ್ಯಾಧಿಕಾರಿ ಡಾ.ತಿಮ್ಮರಾಜು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸಾರ್ವಜನಿಕವಾಗಿ ಕೋವಿಡ್ ಪರೀಕ್ಷೆ ನಡೆಸಿ ಮಾತನಾಡಿದರು.
ತಾಲೂಕಿನಲ್ಲಿ 40 ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ ದ್ವಾರನಕುಂಟೆ ವ್ಯಾಪ್ತಿಯಲ್ಲಿ 856 ಜನರಿಗೆ ಪರೀಕ್ಷೆ ನಡೆಸಿದ್ದು ಕೇವಲ ಇಬ್ಬರಿಗೆ ಮಾತ್ರ ಪಾಸಿಟಿವ್ ಸೋಂಕು ಕಂಡು ಬಂದಿದೆ. ಜನ ಜಾಗೃತರಾಗಿರುವ ಕಾರಣ ಹೆಚ್ಚು ಸೋಂಕು ಹರಡದೆ ನಿಯಂತ್ರಣದಲ್ಲಿದೆ. ಕೋವಿಡ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.
ಪರೀಕ್ಷೆ ನಡೆಸಿದಕೇವಲ 5 ನಿಮಿಷದಲ್ಲಿ ಫಲಿತಾಂಶ ಪಡೆದು ನೆಗೆಟಿವ್ ಇಲ್ಲವೇ ಪಾಸಿಟಿವ್ ಎಂಬ ಬಗ್ಗೆ ದೃಢಪಡಿಸಿಕೊಳ್ಳ ಬಹುದಾಗಿದೆ. ಈ ಪರೀಕ್ಷೆ ನ.14ರ ವರೆಗೆ ನಿರಂತರವಾಗಿ ನಡೆಯಲಿದ್ದು ಜನರು ಸಹಕರಿಸಬೇಕೆಂದು ಮನವಿ ಮಾಡಿದರು. ದ್ವಾರನಕುಂಟೆ ಗ್ರಾಪಂ ಪಿಡಿಒ ಸೀಬಿ ರಂಗಯ್ಯ, ಆರೋಗ್ಯ ಇಲಾಖೆಯಕಿಶೋರ್ ಅಹಮದ್, ಲ್ಯಾಬ್ ಟೆಕ್ನಿಷಿಯನ್ ರವಿಕುಮಾರ್, ಮುಖಂಡ ಶಿವಣ್ಣ ಇತರರು ಇದ್ದರು.