ವಾಷಿಂಗ್ಟನ್: ವ್ಯತಿರಿಕ್ತ ನೀತಿಗಳ ಪರಿಣಾಮ ಅಮೆರಿಕ ದಲ್ಲಿ ಕೋವಿಡ್ ಸೋಂಕು ಪ್ರಮಾಣ ನಿರಂತರ ಏರಿಕೆ ಯಾಗುತ್ತಿದ್ದರೂ, ಸೋಂಕು ಹೆಚ್ಚಲು ನೆರೆಯ ಮೆಕ್ಸಿಕೋ ಕಾರಣ ಎಂಬ ವಿತಂಡವಾದವನ್ನು ಡೊನಾಲ್ಡ್ ಟ್ರಂಪ್ ಅವರ ಆಡಳಿತ ಮುಂದಿಟ್ಟಿದೆ.
ಗುರುವಾರ ವೈಟ್‌ಹೌಸ್‌ನಲ್ಲಿ ಪರಿಸ್ಥಿತಿ ಬಗ್ಗೆ “ಕೋವಿಡ್ ವೈರಸ್ ಟಾಸ್ಕ್ ಫೋರ್ಸ್’ ಸಭೆ ನಡೆದಿದ್ದು ಈ ವೇಳೆ ಮೆಕ್ಸಿಕೋದಿಂದ ಹರಡಿರಬಹುದು ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಅಮೆರಿಕದಾದ್ಯಂತ ಕೇಸುಗಳು ಏರುತ್ತಿವೆ. ಹೊಸ ಪ್ರದೇಶಗಳತ್ತ ಸೋಂಕು ಹಬ್ಬುತ್ತಿದೆ. ಸದ್ಯ ಅರಿಝೋನಾ ಹಾಟ್‌ಸ್ಪಾಟ್ ಆಗಿದ್ದು, ಅತಿ ಹೆಚ್ಚು ಪ್ರಕರಣಗಳಿವೆ. ಇದರೊಂದಿಗೆ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ನಾರ್ತ್ ಕೆರೋಲಿನಾಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ.
ಕಳೆದ ಮಾರ್ಚ್‌ನಲ್ಲಿ ಮೆಕ್ಸಿಕೋ-ಅಮೆರಿಕ ಮಧ್ಯೆ ಅಗತ್ಯೇತರ ಪ್ರಯಾಣಕ್ಕೆ ಎರಡೂ ಸರಕಾರಗಳು ಒಪ್ಪಂದಕ್ಕೆ ಬಂದಿದ್ದು, ಈ ಕಾರಣದಿಂದಾಗಿ ಸೋಂಕಿತರು ಅಲ್ಲಿಂದ ಅಮೆರಿಕಕ್ಕೆ ಸಂಚರಿಸಿ ಸೋಂಕು ಹರಡಲು ಕಾರಣವಾಯಿತು ಎಂಬ ವಾದ ಮುಂದಿಡಲಾಗಿದೆ.
ಹಾಗೆ ನೋಡಿದರೆ ಮೆಕ್ಸಿಕೋದಲ್ಲೇ ಸೋಂಕಿತರು ಕಡಿಮೆ. ಒಟ್ಟಾರೆ 1.33 ಲಕ್ಷ ಪ್ರಕರಣಗಳು ಕಂಡು ಬಂದಿದ್ದು 16 ಸಾವಿರ ಮಂದಿ ಮೃತಪಟ್ಟಿದ್ದಾರೆ. ಎರಡೂ ದೇಶಗಳ ಗಡಿ ತೆರೆದೇ ಇದ್ದರೂ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿದಿದೆ. ಈ ಮೊದಲಿಂದಲೂ ಟ್ರಂಪ್ ಮೆಕ್ಸಿಕೋವನ್ನು ವಿವಿಧ ಕಾರಣಕ್ಕೆ ಬಲಿಪಶು ಮಾಡುತ್ತಿದ್ದು, ಕೋವಿಡ್ ವಿಚಾರದಲ್ಲಿ ಮೆಕ್ಸಿಕೋ ಮೇಲೆ ಕೈತೋರಿಸಿ ಪಾರಾಗುವ ಆತುರದಲ್ಲಿದ್ದಾರೆ ಎನ್ನಲಾಗಿದೆ.