ಚೆನ್ನೈ: ರಾಜ್ಯದಲ್ಲಿ ಸುಮಾರು ಮೂರು ಸಾವಿರದಷ್ಟು ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜುಲೈ 19ರವರೆಗೂ ಲಾಕ್ ಡೌನ್ ವಿಸ್ತರಿಸಲು ತಮಿಳುನಾಡು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದಾಗಿ ಶನಿವಾರ (ಜುಲೈ 10) ತಿಳಿಸಿದೆ.
ಇದನ್ನೂ ಓದಿ:ಮೋಹಕ ತಾರೆಗೆ ನುಗ್ಗೆ ಕಾಯಿ ಇಷ್ಟ ಇಲ್ವಂತೆ-ಹಾಲು ಕುಡಿಯಲ್ವಂತೆ!
ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಅಂತರ್ ರಾಜ್ಯ ಬಸ್ ಸಂಚಾರ(ಖಾಸಗಿ ಮತ್ತು ಸರ್ಕಾರಿ), ಸಿನಿಮಾ ಥಿಯೇಟರ್, ಬಾರ್, ಪಬ್ಸ್, ಈಜುಕೊಳ, ಸಾಂಸ್ಕೃತಿಕ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆ, ಪ್ರಾಣಿ ಸಂಗ್ರಹಾಲಯ ಬಂದ್ ಆಗಿರಲಿದೆ ಎಂದು ಹೇಳಿದೆ.
ಈ ನೂತನ ಮಾರ್ಗಸೂಚಿ ಜುಲೈ 12ರಿಂದ ಜಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿವಾಹ ಸಮಾರಂಭದಲ್ಲಿ 50 ಮಂದಿ ಹಾಗೂ ಶವಸಂಸ್ಕಾರಕ್ಕೆ 20 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ ಎಂದು ನಿಗದಿಪಡಿಸಲಾಗಿದೆ.
ರಾತ್ರಿ 9ಗಂಟೆವರೆಗೆ ಎಲ್ಲಾ ಅಂಗಡಿ, ವಾಣಿಜ್ಯ ಚಟುವಟಿಕೆಗಳು ನಡೆಸಲು ಅನುಮತಿ ನೀಡಿದೆ. ಪಾಂಡಿಚೇರಿಗೆ ಬಸ್ ಸಂಚರಿಸಲು ಅನುಮತಿ ನೀಡಲಾಗಿದೆ. ಹೋಟೆಲು, ಟೀ ಸ್ಟಾಲ್, ಬೇಕರಿ, ರಸ್ತೆ ಬದಿ ವ್ಯಾಪಾರಿಗಳು ರಾತ್ರಿ 9ಗಂಟೆವರೆಗೆ ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದೆ.
ತಮಿಳುನಾಡಿನಲ್ಲಿ 33 ಸಾವಿರಕ್ಕೂ ಅಧಿಕ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ದಿನಂಪ್ರತಿ 1.5 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 24.46 ಲಕ್ಷ ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ.