Advertisement

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

12:37 AM Nov 11, 2024 | Team Udayavani |

ಹುಬ್ಬಳ್ಳಿ: ಕೋವಿಡ್‌ ಅವ್ಯವಹಾರ ವರದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರವಿವಾರ ಸುದ್ದಿಗಾರರ ಜತೆ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ಹಾ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಸಂಪುಟ ಉಪ ಸಮಿತಿ ಅಧ್ಯಯನ ಮಾಡುತ್ತಿದೆ. ಅದರ ವರದಿ ಬಂದ ಅನಂತರ ಸಂಪುಟದಲ್ಲಿ ಚರ್ಚಿಸಲಾಗುವುದು. ಇದ್ಯಾವುದೂ ಗೊಡ್ಡು ಬೆದರಿಕೆಯಲ್ಲ. ಮುಂದಿನ ದಿನಗಳಲ್ಲಿ ಕ್ರಿಮಿನಲ್‌ ವಿಚಾರಣೆ ಆರಂಭವಾದಾಗ ನಿಜಾಂಶ ಗೊತ್ತಾಗಲಿದೆ ಎಂದರು.

ನ್ಯಾಯಾಂಗ ಬಗ್ಗೆ ನಂಬಿಕೆಯಿದೆ ಎನ್ನುವ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನ್ಯಾಯಾಂಗ ಅವರಿಗೆ ಮಾತ್ರ ಇದೆಯೇ? ಅದು ಇರುವುದು ನ್ಯಾಯ ಕೊಡುವುದಕ್ಕೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು. ತಪ್ಪು ಅಂತ ಸಾಬೀತಾದ ಮೇಲೆ ಯಡಿಯೂರಪ್ಪ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಯಡಿಯೂರಪ್ಪ ಅವರ ಕೊಲೆಗೆ ಸಂಚು ನಡೆದಿದ್ದು ನಿಜವಾಗಿದ್ದರೆ, ಅಂದೇ ಯಾಕೆ ಅವರು ಪ್ರಕರಣ ದಾಖಲಿಸಲಿಲ್ಲ? ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆಯಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಡಾ ನಿವೇಶನ ನೋಂದಣಿಗೆ ತಹಶೀಲ್ದಾರ್‌ ಹಣ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ಸುಳ್ಳು. ತಹಶೀಲ್ದಾರ್‌ ಚೆಕ್‌ ಮೂಲಕ ಏನಾದರೂ ಹಣ ನೀಡಿದ್ದಾರೆಯೇ? ದಾನಪತ್ರ ಮಾಡಲು ನನ್ನ ಭಾವಮೈದ ಹಣ ಕೊಟ್ಟಿದ್ದಾರೆ. ನಾನು, ನನ್ನ ಪತ್ನಿ ಸಹಿಪತ್ರ ಮಾಡಲು ಹಣ ನೀಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next