Advertisement

Covid Scam: ಚೀನಾದಿಂದ ಪಿಪಿಇ ಕಿಟ್‌ ಖರೀದಿ ದೇಶದ್ರೋಹವಲ್ಲವೇ?: ಸಚಿವ ಪ್ರಿಯಾಂಕ್‌ ಖರ್ಗೆ

12:18 AM Nov 11, 2024 | Team Udayavani |

ಬೆಂಗಳೂರು: ಕೊರೊನಾ ಅವಧಿಯಲ್ಲಿ ರಾಜ್ಯ ಸಹಿತ ದೇಶದಲ್ಲೇ ಪಿಪಿಇ ಕಿಟ್‌ಗಳು ಲಭ್ಯವಿದ್ದರೂ ಯಾವುದೇ ಬಿಡ್‌ ಮಾಡದೆ ಚೀನಾದಿಂದ ಖರೀದಿಸಲಾಗಿದೆ. ಆಗ ಚೀನಾದಿಂದ ಯಾವುದೇ ವಸ್ತು ಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದೂ ಕೇಂದ್ರ ಸರಕಾರ ಸೂಚಿಸಿತ್ತು. ಇದರ ನಡುವೆಯೂ ಅದೇ ಬಿಜೆಪಿ ಸರಕಾರ ಖರೀದಿ ಪ್ರಕ್ರಿಯೆ ನಡೆಸಿದೆ. ಇದು ದೇಶದ್ರೋಹ ಅಲ್ಲವೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭ 416.48 ಕೋಟಿ ಮೊತ್ತದ ಔಷಧ, ಉಪಕರಣಗಳು, ಕಿಟ್‌ಗಳ ಖರೀದಿಗೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ರಾಜ್ಯ ಸೇರಿದಂತೆ ದೇಶದಲ್ಲೇ ಪಿಪಿಇ ಕಿಟ್‌ಗಳು ಲಭ್ಯವಿದ್ದರೂ ಯಾವುದೇ ಬಿಡ್‌ ಮಾಡದೆ ಚೀನಾದಿಂದ ಪ್ರತಿ ಕಿಟ್‌ಗೆ 2,049ರಿಂದ 2,117.53 ರೂ. ಬೆಲೆಯಲ್ಲಿ ಖರೀದಿಸಲಾಗಿದೆ. ಆದರೆ, ಕರ್ನಾಟಕ ಸ್ಟೇಟ್‌ ಮೆಡಿಕಲ್‌ ಸಪ್ಲೆ„ ಕಾರ್ಪೊರೇಶನ್‌ ಪ್ರಕಾರ 333.40 ರೂ.ಗಳಲ್ಲೇ ದೊರೆಯುತ್ತಿತ್ತು. ಇದನ್ನು ಸ್ವತಃ ಅಂಕಿ-ಅಂಶಗಳೇ ಹೇಳುತ್ತವೆ. 3 ಲಕ್ಷ ಪಿಪಿಇ ಕಿಟ್‌ಗಳನ್ನು 62.5 ಕೋಟಿ ಮೊತ್ತದಲ್ಲಿ ಚೀನಾದ 2 ಕಂಪೆನಿಗಳಿಂದ ಪೂರೈಕೆ ಮಾಡಿಕೊಳ್ಳಲಾಗಿದೆ. ಇದರ ಸಾಗಾಣಿಕೆಗೇ 21.35 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ದೂರಿದರು.

ಕೊರೊನಾ ಅವ್ಯವಹಾರಕ್ಕೆ ಏನು ಉತ್ತರ:
ಕಾಂಗ್ರೆಸ್‌ ಸರಕಾರದ ಮೇಲೆ ಪ್ರಧಾನಿ ಮೋದಿ ಮಾಡಿರುವ 700 ಕೋ.ರೂ. ಲೂಟಿ ಆರೋಪಕ್ಕೆ ಯಾವುದೇ ದಾಖಲೆ ಅಥವಾ ಆಧಾರ ಇಲ್ಲ. ಆದರೆ ರಾಜ್ಯದಲ್ಲಿ ನಿಮ್ಮದೇ ಪಕ್ಷ ಬಿಜೆಪಿಯ ಅಧಿಕಾರಾವಧಿಯಲ್ಲಿ ಸುಮಾರು 7 ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರೊನಾ ಅವ್ಯವಹಾರ ನಡೆದಿದ್ದು, ಈ ಸಂಬಂಧ ದಾಖಲೆಗಳು ಕೂಡ ಲಭ್ಯ ಇವೆ. ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.

“ನಾ ಖಾವುಂಗಾ ನಾ ಖಾನೇದೂಂಗಾ’ ಎಂದು ಹೇಳುತ್ತಾರೆ. ಆದರೆ ಕೊರೊನಾ ಅವಧಿಯಲ್ಲಿ ತಮ್ಮದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆಗ ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ನ್ಯಾಯಮೂರ್ತಿ ಕುನ್ಹಾ ತಮ್ಮ ಮಧ್ಯಾಂತರ ವರದಿಯಲ್ಲಿ ಬಿಚ್ಚಿಟ್ಟಿದ್ದಾರೆ. ಇದರ ಬಗ್ಗೆ ತಮ್ಮ ಸಮರ್ಥನೆ ಏನು ಎಂದು ಪ್ರಿಯಾಂಕ್‌ ಕೇಳಿದರು.

700 ಕೋಟಿ ರೂ. ಲೂಟಿ ಎಂದು ಹೇಳುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದೀರಿ ಎಂದು ಆರೋಪಿಸಿದ ಪ್ರಿಯಾಂಕ್‌ ಖರ್ಗೆ, ಕನ್ನಡಿಗರ ಬೆವರು ಬೇಕು, ಕನ್ನಡಿಗರ ತೆರಿಗೆ, ದುಡಿಮೆ, ಮಾನವ ಸಂಪನ್ಮೂಲ ಎಲ್ಲವೂ ಬೇಕು. ಜತೆಗೆ ಪದೇ ಪದೆ ನೀವು ಮಾಡುವ ಅವಮಾನ ಸಹಿಸಿಕೊಳ್ಳಬೇಕು. ಈ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ದೇಶದಲ್ಲಿ ಸುಳ್ಳಿನ ಕಾರ್ಖಾನೆ ತೆರೆಯಲಾಗಿದ್ದು, ಅದರ ಮಾಲಕರು ಸ್ವತಃ ಮೋದಿ ಆಗಿದ್ದಾರೆ. ಕರ್ನಾಟಕ ಸಹಿತ ಅಲ್ಲಲ್ಲಿ ಕೆಲವು ಬಾಡಿಗೆ ಭಾಷಣಕಾರರನ್ನು ಅದಕ್ಕೆ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next