Advertisement

ಕೋವಿಡ್ “ಸಾರಿ’ಪ್ರಕರಣ ಪತ್ತೆಗೆ ಔಷಧ ಅಂಗಡಿಯವರ ಸಾಥ್‌

10:07 AM Jun 16, 2020 | sudhir |

ಮಂಗಳೂರು: ಕೋವಿಡ್ ಗೆ ಸಂಬಂಧಿಸಿದಂತೆ ಟ್ರಾವೆಲ್‌ ಹಿಸ್ಟರಿ ಇಲ್ಲದ ಪ್ರಕರಣಗಳ (“ಸಾರಿ’-ತೀವ್ರ ಉಸಿರಾಟ ಸಮಸ್ಯೆ) ಪತ್ತೆ ಹಚ್ಚುವಲ್ಲಿ ಮೆಡಿಕಲ್‌ ಸ್ಟೋರ್‌ಗಳಿಂದ ಬರುವ ಮಾಹಿತಿಯೂ ಆರೋಗ್ಯ ಇಲಾಖೆಗೆ ಸಹಕಾರಿಯಾಗುತ್ತಿದೆ.

Advertisement

ಮೆಡಿಕಲ್‌ಗ‌ಳಲ್ಲಿ ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಔಷಧಗಳನ್ನು ಖರೀದಿಸುವವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಸಹಿತ ಅಗತ್ಯ ಮಾಹಿತಿಯನ್ನು ಆರೋಗ್ಯ ಇಲಾಖೆಯ ಆ್ಯಪ್‌ಗೆ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಆರೋಗ್ಯ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಅವರು ಕರೆ ಅಥವಾ ನೇರವಾಗಿ ಮನೆಗೆ ತೆರಳಿ ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತಾರೆ.

ಕೋವಿಡ್ ಆರಂಭದಲ್ಲಿ ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಔಷಧವನ್ನು ವೈದ್ಯರ ಚೀಟಿ (ಪ್ರಿಸ್ಕ್ರಿಪ್ಶನ್‌) ಇಲ್ಲದೆ ನೀಡಬಾರದೆಂದು ಆದೇಶಿಸಲಾಗಿತ್ತು. ಅನಂತರ ಆ ರೀತಿಯ ಔಷಧ ನೀಡಿದರೂ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಯಿತು. ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಆ್ಯಪ್‌ ರೂಪಿಸಲಾಗಿದೆ. ದ.ಕ. ಜಿಲ್ಲೆಯೊಂದರಲ್ಲೇ ಪ್ರತಿದಿನವೂ ಔಷಧ ಅಂಗಡಿಯವರ ಸಹಕಾರದಿಂದ ಸುಮಾರು 2000ಕ್ಕೂ ಅಧಿಕ ಔಷಧ ಖರೀದಿದಾರರ ಮಾಹಿತಿ ಅಪ್‌ಲೋಡ್‌ ಆಗುತ್ತಿದೆ.

ಖರೀದಿ ಮರುದಿನವೇ ವಿಚಾರಣೆ
ಅಲರ್ಜಿ ಮತ್ತು ಕೆಮ್ಮಿಗೆ ಸಂಬಂಧಿಸಿ ಔಷಧ ಖರೀದಿಸಿದ ಕೆಲವು ಮಂದಿಯ ಮನೆಗೆ ಮರುದಿನವೇ ಆಶಾ ಕಾರ್ಯಕರ್ತೆಯರು ತೆರಳಿ ಆರೋಗ್ಯದ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸಿದ್ದಾರೆ. ಮಾತ್ರವಲ್ಲದೆ ಅನಂತರ ನಿಯಮಿತವಾಗಿ ಮೊಬೈಲ್‌ ಮೂಲಕ ವಿಚಾರಣೆ ನಡೆಸಿದ್ದಾರೆ.

ಸರ್ವರ್‌ ಸಮಸ್ಯೆ ಅಡ್ಡಿ
ಆ್ಯಪ್‌ಗೆ ಮಾಹಿತಿ ನೀಡಲು ಕೆಲವು ದಿನಗಳಿಂದ ಸರ್ವರ್‌ ಸಮಸ್ಯೆಯಾಗಿದೆ. ಇದರಿಂದಾಗಿ ಗ್ರಾಹಕರಿಗೆ ಔಷಧ ನೀಡುವುದಕ್ಕೂ ಸಮಸ್ಯೆಯಾಗುತ್ತಿದೆ ಎಂದು ಕೆಲವು ಮೆಡಿಕಲ್‌ನವರು ದೂರಿದ್ದಾರೆ.

Advertisement

ದಿನಕ್ಕೆ 2,000 ಅಪ್‌ಲೋಡ್‌
ದ.ಕ ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 2,000 ಜ್ವರ, ಶೀತ, ಕೆಮ್ಮು ಮೊದಲಾದವುಗಳಿಗೆ ಸಂಬಂಧಿಸಿ ಔಷಧ ಖರೀದಿಸಿದವರ ವಿವರ ಅಪ್‌ಲೋಡ್‌ ಆಗುತ್ತಿವೆ. ಗ್ರಾಹಕರ ಮಾಹಿತಿ ಅಪ್‌ಲೋಡ್‌ ಮಾಡದ ಹಲವು ಮೆಡಿಕಲ್‌ಗ‌ಳಿಗೆ ನೋಟಿಸ್‌ ಕಳುಹಿಸಲಾಗಿದೆ. ಅಗತ್ಯ ಬಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಶಂಕರನಾಯಕ್,‌ ಸಹಾಯಕ ಜಿಲ್ಲಾ ಔಷಧ ನಿಯಂತ್ರಕರು, ದ.ಕ ಜಿಲ್ಲೆ

“ಸಾರಿ’ ಪ್ರಕರಣ ಪತ್ತೆಗೆ ಸಹಕಾರಿ
ಜ್ವರ, ಶೀತ, ಕೆಮ್ಮು ಮೊದಲಾದ ಔಷಧ ಖರೀದಿದಾರರ ಮಾಹಿತಿ ಸಂಗ್ರಹಿಸಿ ಅವರ ಆರೋಗ್ಯದ ಕುರಿತು ವಿಚಾರ ಮಾಡುವುದರಿಂದಲೂ ಕೊರೊನಾ ಜನಸಮುದಾಯದಲ್ಲಿ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಮೆಡಿಕಲ್‌ಗ‌ಳು ಗ್ರಾಹಕರ ಮಾಹಿತಿ ಇಲಾಖೆಯ ಆ್ಯಪ್‌ಗೆ ಅಪ್‌ಲೋಡ್‌ ಮಾಡುವುದು ಕಡ್ಡಾಯ. ಕೆಲವೊಂದು ಔಷಧಗಳನ್ನು ವೈದ್ಯರ ಪ್ರಿಸ್ಕ್ರಿಪ್ಶನ್‌ ಇಲ್ಲದೆ ನೀಡುವುದಕ್ಕೂ ಅವಕಾಶವಿಲ್ಲ.
– ಡಾ| ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ .ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next