ಮಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು,ಜನ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಬೇಕೆಂದು ಮಹಾನಗರಪಾಲಿಕೆಯ ಆಯುಕ್ತರು ಹೇಳಿದ್ದಾರೆ.
ಈ ಕುರಿತು, ಪ್ರಕರಣ ಹೊರಡಿಸಿರುವ ಆಯುಕ್ತರು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಖಚಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಲಾಕ್‍ಡೌನ್ ತೆರವಾದ ಬಳಿಕ ಶಾಲಾ-ಕಾಲೇಜುಗಳನ್ನು ತೆರೆದಿದ್ದೇವೆ. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಹೊಟೇಲ್, ಸುಪರ್ ಮಾರ್ಕೇಟ್, ಇನ್ನಿತರ ಜನನಿಬಿಡ ಪ್ರದೇಶಗಳಿಗೆ ಅನುಮತಿ ಕೊಟ್ಟಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಅನುಮತಿ ಕೊಡುವಾಗ ಕೋವಿಡ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ 10 ದಿನಗಳಿಗೆ ಅಲ್ಲಿನ ಎಲ್ಲಾ ಕೆಲಸಗಾರರ ಕೋವಿಡ್ ಪರೀಕ್ಷೆ ನಡೆಸಬೇಕು ಎಂಬ ನಿಯಮ ಹಾಕಲಾಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಹೊರ ರಾಜ್ಯದ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಕಣ್ಣಿಟ್ಟು, ಅವರು ಊರಿಗೆ ಹೋಗುವುದು ಬರುವುದು ಮಾಡುವಾಗ ಕಡ್ಡಾಯ ಆರ್ ಟಿಸಿಆರ್ ಪರೀಕ್ಷೆ ಮಾಡಿ ಅವರನ್ನು ಕ್ವಾರಂಟೈನ್ ಮಾಡಬೇಕಾದ ಅನಿವಾರ್ಯತೆ ಇದ್ದಾಗಲೂ ಕೂಡಾ ಕೆಲವು ಶಿಕ್ಷಣ ಸಂಸ್ಥೆಗಳು ಕಾನೂನನ್ನು ಪಾಲಿಸುತ್ತಿಲ್ಲ ಎಂದಿದ್ದಾರೆ.
ಕೆಲವು ವಸತಿ ಬಡಾವಣೆ, ಮಾಲ್‍ಗಳಲ್ಲಿ ಕೋವಿಡ್ ಪರೀಕ್ಷೆಗೆ ಅನುಮತಿ ಕೊಡದೆ, ಮ.ನ.ಪಾ. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳಿಗೆ ಅಸಹಕಾರ ವ್ಯಕ್ತಪಡಿಸುವ ಬಗ್ಗೆ ವರದಿ ಆಗಿದ್ದು, ಸಾರ್ವಜನಿಕರು, ಶಿಕ್ಷಣ ಸಂಸ್ಥೆಯವರು, ಬಡಾವಣೆಯ ನಿವಾಸಿಗಳು, ಕೋವಿಡ್ ಖಚಿತ ಪರೀಕ್ಷೆಗೆ ಅನುವು ಮಾಡಿಕೊಟ್ಟು ಮೂರನೇ ಅಲೆಯನ್ನು ನಿಯಂತ್ರಿಸಲು ಮ.ನ.ಪಾ.ದ ಜೊತೆ ಕೈ ಜೋಡಿಸಲು ವಿನಂತಿಸಿಕೊಳ್ಳಲಾಗಿದೆ.
ತಪ್ಪಿದಲ್ಲಿ Epidemic Act ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.