Advertisement

ಉಡುಪಿ ಜಿಲ್ಲಾಧಿಕಾರಿಗಳಿಂದ ದಿಢೀರ್‌ ದಾಳಿ : ನಿಯಮ ಉಲ್ಲಂಘಿಸಿದ 5 ಬಸ್ಸುಗಳ ವಿರುದ್ಧ ಪ್ರಕರಣ

09:22 PM Apr 19, 2021 | Team Udayavani |

ಉಡುಪಿ : ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಹರಡುತ್ತಿದ್ದು, ಸಾರ್ವಜನಿಕರು ಸರಕಾರದ ಸೂಚನೆಯ ಅನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಕುರಿತು ಜಾಗೃತಿ ಮೂಡಿಸಿ ದಂಡ ವಿಧಿಸುವ ಕುರಿತಂತೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೋಮವಾರ ಸಂಜೆ ಸಂತೆಕಟ್ಟೆಯಲ್ಲಿ ದಿಢೀರ್‌ ದಾಳಿ ನಡೆಸಿದರು.

Advertisement

ಬಸ್‌ಗಳಲ್ಲಿ ನಿಗದಿತ ಆಸನ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ 5 ಬಸ್‌ಗಳ ಚಾಲಕರು, ನಿರ್ವಾಹಕರಿಂದ ದಂಡ ವಸೂಲಿ ಮಾಡಿ ಬಸ್‌ ಮಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಬಸ್‌ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಅವರೆಲ್ಲರಿಗೂ ಟಿಕೆಟ್‌ನ ಮೊತ್ತವನ್ನು ಹಿಂದಿರುಗಿಸುವಂತೆ ಕಂಡಕ್ಟರ್‌ಗೆ ಸೂಚಿಸಿದರು. ಸರಕಾರದ ಆದೇಶವಿದ್ದರೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದ ಚಾಲಕ ಮತ್ತು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರಯಾಣಿಕರಿಗೂ ಸಹ ಬುದ್ದಿವಾದ ಹೇಳಿ ಬಸ್‌ನಲ್ಲಿ ಸೀಟ್‌ ಇಲ್ಲವಾದಲ್ಲಿ ಅನಂತ‌ರದ ಬಸ್‌ನಲ್ಲಿ ಸಂಚರಿಸುವಂತೆ ತಿಳಿಸಿದರು.

ಇದನ್ನೂ ಓದಿ :ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

ಅನಂತರ ಮೆಡಿಕಲ್‌ ಶಾಪ್‌ ಒಂದರಲ್ಲಿ ಮಾಸ್ಕ್ ಧರಿಸದೇ ಇದ್ದ ಸಿಬಂದಿಗಳಿಂದ, ಅಂಗಡಿಗಳಿಂದ, ಕ್ಲಿನಿಕ್‌ ಒಂದರಲ್ಲಿ ಮಾಸ್ಕ್ ಧರಿಸದಿದ್ದ ರೋಗಿಯ ಸಂಬಂಧಿಕನಿಗೂ ದಂಡ ವಿಧಿಸಲಾಯಿತು. ಸಹಕಾರಿ ಸಂಘವೊಂದರಲ್ಲಿ ಮಾಸ್ಕ್ ಇಲ್ಲದೇ ಕುಳಿತಿದ್ದ ಸಿಬಂದಿಗೆ ಹಾಗೂ ಸಂಘದ ಹೆಸರಿನಲ್ಲಿಯೂ ದಂಡ ವಸೂಲಿ ಮಾಡಲಾಯಿತು. ಬಸ್‌ ನಿಲ್ದಾಣದಲ್ಲಿ ಮಾಸ್ಕ್ ಇಲ್ಲದೆ ನಿಂತಿದ್ದ ದಂಪತಿಗೆ, ಎಟಿಎಂ ಒಂದರಲ್ಲಿ ಮಾಸ್ಕ್ ಧರಿಸದೆ ಹಣ ತೆಗೆಯುತ್ತಿದ್ದವರಿಗೂ ದಂಡ ವಿಧಿಸಲಾಯಿತು. ಇದೇ ಸಂದರ್ಭದಲ್ಲಿ ಮಾಸ್ಕ್ ಇಲ್ಲದೆ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳಿಗೂ ಕೋವಿಡ್‌ ಕುರಿತು ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿಗಳು, ಸ್ವತ: ತಾವೇ ಮಾಸ್ಕ್ ನೀಡಿ ಧರಿಸುವಂತೆ ಸೂಚಿಸಿದರು.

Advertisement

ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ವಾಹನ ಸವಾರರಿಗೂ ದಂಡ ವಿಧಿಸಿದ ಜಿಲ್ಲಾಧಿಕಾರಿಗಳು ಕೋವಿಡ್‌ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರೂ ಸಹ ಅಗತ್ಯ ಸಹಕಾರ ನೀಡಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಮತ್ತು ಸ್ಯಾನಿಟೈಸರ್‌ಗಳ ಬಳಕೆ ಮಾಡುವುದರ ಜತೆಗೆ ಸರಕಾರ ಮತ್ತು ಜಿಲ್ಲಾಡಳಿತ ನೀಡುವ ಆದೇಶಗಳನ್ನು ಪಾಲಿಸುವುದರ ಮೂಲಕ ಕೋವಿಡ್‌ ಹರಡದಂತೆೆ ಎಚ್ಚರವಹಿಸುವಂತೆ ತಿಳಿಸಿದರು.

ದಾಳಿಯಲ್ಲಿ ಜಿ.ಪಂ.ಸಿಇಒ ಡಾ| ನವೀನ್‌ ಭಟ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆಯ ಆಯುಕ್ತ ಡಾ| ಉದಯಶೆಟ್ಟಿ, ಉಡುಪಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‌ ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

5 ಬಸ್ಸುಗಳ ವಿರುದ್ಧ ಪ್ರಕರಣ
ಬಸ್ಸುಗಳಲ್ಲಿ ಸೀಟು ಇದ್ದಷ್ಟೇ ಮಂದಿ ಪ್ರಯಾಣಿಕರನ್ನು ಹಾಕಬೇಕು. ಈ ನಿಯಮವನ್ನು ಉಲ್ಲಂಘಿಸಿದ 5 ಬಸ್ಸುಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಬಸ್ಸುಗಳಲ್ಲಿ ಯಾರು ಕೂಡ ನಿಂತುಕೊಂಡು ಪ್ರಯಾಣಿಸಬಾರದು. ಈ ಘಟನೆಗಳು ಮುಂದುವರಿದರೆ ಬಸ್ಸು ಮಾಲಕರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು. ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದರಿಂದ ಮತ್ತಷ್ಟು ಕೊರೊನಾ ಸೋಂಕು ಹಬ್ಬಿಸಲು ದಾರಿ ಮಾಡಿದಂತಾಗುತ್ತದೆ. ಸಾರ್ವಜನಿಕರು ಯಾರು ಕೂಡ ಸೀಟು ಖಾಲಿ ಇದ್ದ ಬಸ್ಸುಗಳಲ್ಲಷ್ಟೇ ಪ್ರಯಾಣಿಸಬೇಕು. ಬಸ್ಸುಗಳ ಸಂಖ್ಯೆ ಸಾಕಷ್ಟು ಸಂಖ್ಯೆಯಲ್ಲಿವೆ. ಸ್ವಲ್ಪ ಹೊತ್ತು ಕಾದು ಅನಂತರ ಪ್ರಯಾಣಿಸಬೇಕು.
-ಜಿ.ಜಗದೀಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next