ವರದಿ : ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸೇನಾನಿಗಳಿಗೆ ಸರಕಾರ ಕೋವಿಡ್ ರಿಸ್ಕ್ ಭತ್ಯೆ ಘೋಷಣೆ ಮಾಡಿದೆಯೇನೋ ಸರಿ. ಆದರೆ ಇಲ್ಲಿನ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್‌ಗಳಿಗೆ ನಯಾ ಪೈಸೆ ಭತ್ಯೆ ತಲುಪಿಲ್ಲ.
ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕಾರ್ಯ. ಮೊದಲ ಅಲೆಯ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಸೋಂಕಿತರ ಆರೈಕೆ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದರು. ಇವರ ಅವಿಸ್ಮರಣೆಯ ಕಾರ್ಯ ಮೆಚ್ಚಿ ಸರಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವೈದ್ಯಕೀಯ ಸೇನಾನಿಗಳಿಗೆ 2020ರ ಆಗಸ್ಟ್ ತಿಂಗಳಲ್ಲಿ ಅಪಾಯ ಭತ್ಯೆ ಘೋಷಣೆ ಮಾಡಿತು.
ಕೆಲವೆಡೆ ಈ ವಿಶೇಷ ಭತ್ಯೆಯನ್ನು ವೈದ್ಯಕೀಯ ಸಿಬ್ಬಂದಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಹು-ಧಾ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಂದ ಹಿಡಿದು ವೈದ್ಯಕೀಯ ಸಿಬ್ಬಂದಿಗೆ ನಯಾಪೈಸೆ ದೊರೆತಿಲ್ಲ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಾಲಿಕೆ ಆಸ್ಪತ್ರೆಗಳ ವೈದ್ಯರ ಹಾಗೂ ಸಿಬ್ಬಂದಿಯ ಕಾರ್ಯ ಮರೆಯುವಂತಿಲ್ಲ. ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದವರಿಗೆ ಚಿಕಿತ್ಸೆ, ರೈಲುಗಳ ಮೂಲಕ ನಗರಕ್ಕೆ ಬರುತ್ತಿದ್ದ ಹಾಗೂ ಇಲ್ಲಿಂದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ, ಮೊಬೈಲ್ ಫಿವರ್ ಕ್ಲಿನಿಕ್ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸೇರಿದಂತೆ ಸುಮಾರು ಮೂರ್‍ನಾಲ್ಕು ತಿಂಗಳು ಅವಿರತ ಶ್ರಮ ವಹಿಸಿದ್ದಾರೆ.
ಎರಡನೇ ಅಲೆ ಸಂದರ್ಭದಲ್ಲಿ ಹೋಂ ಐಸೋಲೇಶನ್ ನಲ್ಲಿದ್ದವರಿಗೆ ಚಿಕಿತ್ಸೆ, ಇದರೊಂದಿಗೆ ನಾನ್ ಕೋವಿಡ್ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದಾರೆ. ಇದರೊಂದಿಗೆ ಕೋವಿಡ್ ಪರೀಕ್ಷೆ, ಕೋವಿಡ್ ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ಸೇವೆ ಮಾಡಿದರೂ ಪಾಲಿಕೆ ವ್ಯಾಪ್ತಿಯ ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಸರಕಾರ ಮರೆತಿದೆ.