ಸುರತ್ಕಲ್: ಕೋವಿಡ್ 19 ಸೊಂಕಿನಿಂದ ಮೃತಪಟ್ಟಿದ್ದ ಕುಳಾಯಿಯ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಕೋವಿಡ್ ನಿಯಮಾವಳಿಗೆ ಅನುಸಾರವಾಗಿ ಕ್ರಿಶ್ಚಿಯನ್ ಧಾರ್ಮಿಕ ಪದ್ಧತಿಗಳಂತೆ ನಡೆಸಲಾಯಿತು.
ಸುರತ್ಕಲ್ ಚರ್ಚ್ ನ ದಫನ ಭೂಮಿಯಲ್ಲಿ ಈ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನಡೆಸಲಾಗಿದ್ದು ಈ ಸಂದರ್ಭದಲ್ಲಿ ಚರ್ಚ್ ನ ಧರ್ಮಗುರುಗಳಾಗಿರುವ ಫಾ. ಪೌಲೋಸ್ ಪಿಂಟೋ ಅವರು ಪ್ರಾರ್ಥಿಸಿ ಗೌರವ ಪೂರ್ವಕ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ್ದವರು PPE ಕಿಟ್ ಧರಿಸಿ ಸೂಕ್ತವಾದ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಕೋವಿಡ್ ನಿಯಮಾವಳಿಗಳ ಸೂಕ್ತ ಪಾಲನೆಯನ್ನು ಮಾಡಿದರು.
ಚರ್ಚ್ ನ ಪೀಟರ್ ಅಲೆಕ್ಸ್ ಡಿ’ಸೋಜಾ, ಡೋನಿ ಸುವಾರಿಸ್, ಜೋಸೆಫ್ ಪಿಂಟೋ, ಪೀಟರ್ ಪೌಲ್ ಡಿ’ಸೋಜಾ, ಸಿಸ್ಟರ್ ಆಶಾ, ಗುರ್ಕಾರ್ ಲೀನಾ, ಮೃತ ವ್ಯಕ್ತಿಯ ಪುತ್ರ ಮತ್ತು ಚರ್ಚ್ ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಸೂಕ್ತ ಸಹಕಾರವನ್ನು ನೀಡಿದರು.
ಸುರತ್ಕಲ್ ವ್ಯಾಪ್ತಿಯಲ್ಲಿ ಶುಕ್ರವಾರ ನಾಲ್ವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಕುಳಾಯಿಯ ಓರ್ವ ವ್ಯಕ್ತಿ ಪೊಲೀಸ್ ವಶದಲ್ಲಿದ್ದು ಅವನಿಗೂ ಸೋಂಕು ದೃಢಪಟ್ಟಿದೆ. ಕಾಟಿಪಳ್ಳ, ಕುಳಾಯಿ, ಪಣಂಬೂರು ಪ್ರದೇಶಗಳಲ್ಲಿ ತಲಾ ಒಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.