ವಿಶಾಖಪಟ್ಟಣಂ: ಕೋವಿಡ್ ವೈರಸ್ ಮಹಾಮಾರಿಯ ಉಪಟಳದಿಂದ ಒಂದೆಡೆ ಸಾರ್ವಜನಿಕರು ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದರೆ ಇನ್ನೊಂದೆಡೆ ವೈದ್ಯರು, ನರ್ಸ್ ಗಳೂ ಸೇರಿದಂತೆ ಒಂದು ಬಲುದೊಡ್ಡ ಸರಕಾರಿ ಸೇವಾ ವರ್ಗವು ಹಗಳಿರುಳೆನ್ನದೆ ಈ ಸೋಂಕಿನ ವಿರುದ್ಧ ನೇರಾ ನೇರಾ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹುಡುಕುತ್ತಾ ಹೋದರೆ ಇಂತಹ ಒಬ್ಬೊಬ್ಬರದ್ದೂ ಒಂದೊಂದು ಕಥೆ, ಅದಕ್ಕೆ ಅವರನ್ನೆಲ್ಲಾ ಈ ಸಂದರ್ಭದಲ್ಲಿ ನಾವು ರಿಯಲ್ ಹೀರೋಗಳೆಂದು ಕರೆಯವುದು.
ಇಲ್ಲೊಬ್ಬರು ಇಂತಹ ರಿಯಲ್ ಹೀರೋ ನಮ್ಮ ಮುಂದಿದ್ದಾರೆ. ಅವರೇ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ (ಜಿ.ವಿ.ಎಂ.ಸಿ.) ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಜಿ. ಶ್ರೀಜನಾ ಎಂಬ ಹೆಣ್ಣುಮಗಳು.
IAS ಅಧಿಕಾರಿಯಾಗಿರುವ ಶ್ರೀಜನಾ ಅವರು ತಮ್ಮ ಹೆರಿಗೆಯಾದ 22ನೇ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ತನ್ನ ಅಗತ್ಯತೆಯನ್ನು ಸಾಬೀತುಪಡಿಸಿದ್ದಾರೆ. ಶ್ರೀಜನಾ ಅವರು ತಮ್ಮ ಹೆರಿಗೆಯಾಗುವ ಕೆಲ ದಿನಗಳ ಮುಂಚಿನವರೆಗೂ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ಬಳಿಕ ಹೆರಿಗೆಗಾಗಿ ರಜೆ ಪಡೆದುಕೊಂಡಿದ್ದರು.
ಶ್ರೀಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸ್ವಲ್ಪ ದಿನದಲ್ಲೇ ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಘೋಷಿಸಿತು. ಹೀಗಾಗಿ, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಜನರು ಮನೆಯಿಂದ ಹೊರಬರುವಂತೆ ಮಾಡುವಲ್ಲಿ ಹಾಗೂ ಕೋವಿಡ್ ಪ್ರಕರಣಗಳ ನಿಗಾ, ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಉಸ್ತುವಾರಿ ಹೀಗೆ ನಾನಾ ವಿಚಾರದಲ್ಲಿ ಈ ಸಂಕಷ್ಟದ ಸಂದರ್ಭದಲ್ಲಿ ಸ್ಥಳೀಯಾಡಳಿತಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬಿತ್ತು. ಇದನ್ನು ಅರಿತಕೊಂಡ ಈ ಐ.ಎ.ಎಸ್. ಅಧಿಕಾರಿ ಈ ಸಂಕಷ್ಟದ ಸಂದರ್ಭದಲ್ಲಿ ತಾನು ಕರ್ತವ್ಯ ನಿರ್ವಹಿಸುವುದು ಅತೀ ಅಗತ್ಯ ಎಂಬುದನ್ನು ಅರಿತುಕೊಂಡು ಹೆರಿಗೆಯಾದ 22ನೇ ದಿನಕ್ಕೇ ಜಿವಿಎಂಸಿ ಕಛೇರಿಗೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
ತನ್ನ ಕರ್ತವ್ಯದ ಜೊತೆ ನವಜಾತ ಶಿಸುವಿನ ಲಾಲನೆ ಪಾಲನೆ ಹೇಗೆ ಎಂಬ ವಿಷಯದ ಕುರಿತಾಗಿ ಕೇಳಿದಾಗ ಶ್ರೀಜನ ಈ ವಿಚಾರದಲ್ಲಿ ತನ್ನ ಪತಿ ಹಾಗೂ ಅತ್ತೆ ಸಹಕಾರವನ್ನು ನೆನಪಿಸಿಕೊಳ‍್ಳುತ್ತಾರೆ. ವಕೀಲರಾಗಿರುವ ಇವರ ಪತಿ ಹಾಗೂ ಇವರ ಅತ್ತೆ ಶ್ರೀಜನಾ ಅವರು ಕರ್ತವ್ಯಕ್ಕೆ ತೆರಳಿದ ಬಳಿಕ ಮಗುವನ್ನು ನೋಡಿಕೊಳ್ಳುತ್ತಾರೆ. ಮತ್ತು ಪ್ರತೀ ನಾಲ್ಕು ಗಂಟೆಗಳಿಗೊಮ್ಮೆ ಶ್ರೀಜನಾ ಅವರು ಮನೆಗ ಬಂದು ಮಗುವಿಗೆ ಹಾಲುಣಿಸಿ ತೆರಳುತ್ತಾರೆ.
ಈ ಮೂಲಕ ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಈ ಸಂದರ್ಭದಲ್ಲಿ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತು ಕರ್ತವ್ಯ ನಿಷ್ಠೆಯನ್ನು ಮೆರೆಯುತ್ತಿರುವ ಈ ಐ.ಎ.ಎಸ್. ಅಧಿಕಾರಿಯ ಸೇವೆಗೊಂದು ಸಲಾಂ ಹೊಡೆಯಲೇಬೇಕು.