ಹೊಸದಿಲ್ಲಿ: ದಿಲ್ಲಿ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಮರು ಅಲೆ ಕಾಣಿಸಿಕೊಳ್ಳತೊಡಗಿದೆ. ಕ್ರಮೇಣ ನಿಯಂತ್ರಣಕ್ಕೆ ಬಂದಿದ್ದ ಸೋಂಕಿನ ಸಂಖ್ಯೆ ಈಗ ಮತ್ತೆ ಹೆಚ್ಚಳವಾಗುತ್ತಿದ್ದು, ಹೊಸದಾಗಿ ಸೋಂಕು ಸ್ಫೋಟಗೊಳ್ಳುವ ಭೀತಿ ಆವರಿಸಿದೆ.
ದಿಲ್ಲಿಯು ಈಗಾಗಲೇ 3ನೇ ಹಂತದ ವ್ಯಾಪಿಸುವಿಕೆಗೆ ಸಿಲುಕಿದೆ. ಏರುತ್ತಿರುವ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದ್ದು, ಅದರ ಭಾಗವೆಂಬಂತೆ ಮಾಸ್ಕ್ ಧರಿಸದವರಿಗೆ ಹಾಕುವ ದಂಡದ ಮೊತ್ತವನ್ನು ಈಗಿರುವ 500 ರೂ.ಗಳಿಂದ 2 ಸಾವಿರ ರೂ.ಗೆ ಏರಿಸಿ ಸಿಎಂ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಗಳಲ್ಲಿನ ಕೋವಿಡ್ ಬೆಡ್‌ಗಳ ಸಂಖ್ಯೆ ಹೆಚ್ಚಳಕ್ಕೂ ಕ್ರಮ ಕೈಗೊಂಡಿದ್ದಾರೆ. ಗಂಭೀರವಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡುವಂತೆ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಯಾರೂ ಕೆರೆ, ನದಿ ದಡಗಳಲ್ಲಿ ಛತ್ ಹಬ್ಬ ಆಚರಿಸದಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ತಂಡ ದೌಡು: ದಿಲ್ಲಿಯಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಕಾರಣ, ಅದರ ಪರಿಣಾಮ ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಹರಿಯಾಣ, ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹರಿಯಾಣ, ರಾಜಸ್ಥಾನ, ಗುಜರಾತ್ ಹಾಗೂ ಮಣಿಪುರಕ್ಕೆ ಕೇಂದ್ರ ತಂಡ ದೌಡಾಯಿಸಿದೆ. ಇಲ್ಲಿ ಪ್ರಕರಣ ಹೆಚ್ಚಿರುವ ಜಿಲ್ಲೆಗಳಿಗೆ ತೆರಳಿ, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ.
ಮಹಾರಾಷ್ಟ್ರವೂ ಅಲರ್ಟ್: ಕೆಲವು ತಿಂಗಳ ಹಿಂದೆ ಕೊರೊನಾ ಹಾಟ್‌ಸ್ಪಾಟ್ ಆಗಿದ್ದ ಮಹಾರಾಷ್ಟ್ರದಲ್ಲಿ ಈಗ ಸೋಂಕಿನ ಗ್ರಾಫ್ ಇಳಿಮುಖವಾಗಿದ್ದರೂ, ಮತ್ತೆ ಎರಡನೇ ಅಲೆ ವ್ಯಾಪಿಸುವ ಎಲ್ಲ ಸಾಧ್ಯತೆ ದಟ್ಟವಾಗಿದೆ. ಜನವರಿ-ಫೆಬ್ರವರಿಯಲ್ಲಿ 2ನೇ ಹಂತದ ವ್ಯಾಪಿಸುವಿಕೆ ಆರಂಭವಾಗುವ ಶಂಕೆ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರಕಾರ, ಪರೀಕ್ಷೆ ಹೆಚ್ಚಳ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾರಂಭಿಸಿದೆ. ಸಂಭಾವ್ಯ ಸೂಪರ್ ಸ್ಪ್ರೆಡರ್‌ಗಳನ್ನು ಗುರುತಿಸುವ ನಿಟ್ಟಿನಲ್ಲೂ ಹೆಜ್ಜೆಯಿಡಲಾಗಿದೆ.
ನೈಟ್ ಕರ್ಫ್ಯೂ ಜಾರಿ: ಗುಜರಾತ್‌ನಲ್ಲಿಯೂ ದೀಪಾವಳಿಯ ಬೆನ್ನಲ್ಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲ ಸವಾಲುಗಳನ್ನು ಎದುರಿಸಲು ಸರಕಾರ ಸಿದ್ಧತೆ ನಡೆಸುತ್ತಿದೆ. ಅಹಮದಾಬಾದ್‌ನಲ್ಲಿ ಶುಕ್ರವಾರದಿಂದ ಅನ್ವಯವಾಗುವಂತೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ಅನಿರ್ದಿಷ್ಟಾವಧಿವರೆಗೆ ಇದು ಮುಂದುವರಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.