ಚಾಮರಾಜನಗರ: ಸರ್ಕಾರದ ಆದೇಶ ಅನುಸಾರ2020-21ನೇ ಸಾಲಿನಲ್ಲಿ ವಿಶ್ವ ವಿದ್ಯಾಲಯ ಕಾಲೇಜುಗಳು, ತಾಂತ್ರಿಕ ಕಾಲೇಜುಗಳನ್ನು ನ. 17ರಿಂದ ಪ್ರಾರಂಭಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಲೇಜುಗಳಲ್ಲೂ ಕೋವಿಡ್ 19 ಸೋಂಕು ತಡೆಯಲು ಹೊರಡಿಸಲಾಗಿರುವ ಪ್ರಮಾಣಿತ ಕಾರ್ಯ ವಿಧಾನ ಮಾರ್ಗಸೂಚಿ (ಎಸ್ ಒಪಿ) ಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಕಾಲೇಜು ಪ್ರಾರಂಭಿಸುವ ಹಿನ್ನೆಲೆಯಲ್ಲಿ ಕೋವಿಡ್ ಕುರಿತು ಅನುಸರಿಸಬೇಕಿರುವ ಕ್ರಮಗಳಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ವಿಶ್ವವಿದ್ಯಾಲಯ, ಸರ್ಕಾರಿ, ತಾಂತ್ರಿಕ, ಡಿಪ್ಲೊಮಾ, ಅನುದಾನ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಶೈಕ್ಷಣಿಕ ಸಾಲಿನಲ್ಲಿ ತರಗತಿ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿ ಅನುಸಾರ ಕಾಲೇಜು ಪ್ರಾರಂಭಿಸುವ ಮೂರು ದಿನಗಳ ಮುಂಚಿತವಾಗಿಯೇ ಎಲ್ಲಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಕಡ್ಡಾಯವಾಗಿ ಕೋವಿಡ್-19 (ಆರ್‌ಟಿಪಿಸಿಆರ್) ಪರೀಕ್ಷೆ ಮಾಡಿಸಿ ಪರೀಕ್ಷೆ ವರದಿ ನೆಗೆಟಿವ್ ಇದ್ದಲ್ಲಿಮಾತ್ರ ಕಾಲೇಜುಗಳಿಗೆ ಹಾಜರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದಕ್ಕಾಗಿ ಜವಾಬ್ದಾರಿಯುತ ಹಿರಿಯ ಪುರುಷ ಮತ್ತು ಮಹಿಳಾ ಉಪನ್ಯಾಸಕರನ್ನು ನೋಡೆಲ್ ಅಧಿಕಾರಿಗಳಾಗಿ ನೇಮಕ ಮಾಡಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಹೊರಡಿಸಲಾಗಿರುವ ಪ್ರಮಾಣಿತ ಕಾರ್ಯ ವಿಧಾನಮಾರ್ಗಸೂಚಿ ಹಾಗೂ ವಿಪತ್ತು ನಿರ್ವಹಣೆ ಕಾಯ್ದೆ ಅನುಸಾರ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಕಾಯ್ದೆ ಉಲ್ಲಂ ಸಿದಲ್ಲಿ ಅದರಿಂದಾಗುವ ಗಂಭೀರ ಕ್ರಮಗಳಿಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.
ಪ್ರತಿದಿನ ವಿದ್ಯಾರ್ಥಿಗಳಿಗೆ, ಬೋಧಕ ಹಾಗೂ ಸಿಬ್ಬಂದಿ ಅವರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಪ್ರವೇಶ ಮತ್ತು ನಿರ್ಗಮನ ಸ್ಥಳವನ್ನು ಪ್ರತ್ಯೇಕಗೊಳಿಸಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕಾಲೇಜಿನ ಕಟ್ಟಡ ಕೊಠಡಿಗಳಲ್ಲಿನ ಪೀಠೊಪಕರಣಇನ್ನಿತರ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡಿಸಬೇಕು ಎಂದು ಅವರು ಸೂಚನೆ ನೀಡಿದರು.