ವಿಜಯಪುರ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಕಾರಣ ವಿಜಯಪುರ ಜಿಲ್ಲಾಡಳಿತ ಕರ್ನಾಟಕದಿಂದ ಭೀಮಾ ನದಿಯ ಮೂಲಕ ಮಹಾರಾಷ್ಟ್ರ ಪ್ರವೇಶಿಸುವ ಹಿಂಗಣಿ ಬ್ಯಾರೇಜ್ ನಿರ್ಬಂಧಿಸಿದೆ. ಆದರೆ ಜನರು ಮಾತ್ರ ನಿರ್ಬಂಧ ಮೀರಿ ಓಡಾಟ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಅಧಿಕಾರಿಗಳ ಸತತ ಪರಿಶ್ರಮದ ಫಲವಾಗಿ ಸದ್ಯ ಕೋವಿಡ್ ಸಂಪೂರ್ಣ ಹತೋಟಿಯಲ್ಲಿದೆ. ಆದರೆ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್, ಡೆಲ್ಟಾ ರೋಗದ ಹಾವಳಿ ಜೋರಾಗಿದೆ. ಮತ್ತೊಂದೆಡೆ ಸಂಭವನೀಯ ಕೋವಿಡ್ ಮೂರನೇ ಅಲೆಯ ಭೀತಿಯೂ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜ್ ಎರಡೂ ರಾಜ್ಯಗಳ ಸಂಚಾರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಹೀಗಾಗಿ ಈ ಮಾರ್ಗದ ಸಂಪರ್ಕ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ ಜಿಲ್ಲಾಡಳಿತ ಮಹಾರಾಷ್ಟ್ರ ರಾಜ್ಯದ ಸೋಲಾಪುರ, ಕರ್ನಾಟಕದ ವಿಜಯಪುರ ಜಿಲ್ಲೆಯ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಂಗಣಿ ಬ್ಯಾರೇಜ್ ಮಾರ್ಗದ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದೆ.
ಇದರ ಮುಂದುವರೆದ ಭಾಗವಾಗಿ ಪೋಲಿಸ್ ಭದ್ರತೆಯಲ್ಲಿ ಹಿಂಗಣಿ ಬ್ಯಾರೇಜ್ ಕರ್ನಾಟಕ ಪರಿಸರದಲ್ಲಿ ಜೆಸಿಬಿ ಬಳಸಿ ರಸ್ತೆಯನ್ನು ಆರೇಳು ಆಳಕ್ಕೆ ಗುಂಡಿ ತೋಡಿ ಕಂದಕ ನಿರ್ಮಿಸಿ, ಮುಳ್ಳು ತುಂಬಲಾಗಿದೆ. ಆದರೆ ವಿಜಯಪುರ ಜಿಲ್ಲಾಡಳಿತದ ಆಶಯ ಹಾಗೂ ನಿರ್ಬಂಧ ಮೀರಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜನರು ಅಡ್ಡ ದಾರಿಯಲ್ಲಿ ನದಿಗೆ ಇಳಿದು, ನೇರವಾಗಿ ಸೇತುವೆ ಮೇಲೆ ದ್ವಿಚಕ್ರ ವಾಹನಗಳನ್ನೇ ಎತ್ತಿಟ್ಟು ಸಂಚಾರ ಆರಂಭಿಸಿದ್ದಾರೆ.
ಮತ್ತೂ ಕೆಲವರು ಕಂದಕಕ್ಕೆ ತುಂಬಿರುವ ಮುಳ್ಳು-ಕಂಟಿಗಳ ಮೇಲೆ ಕಲ್ಲುಗಳನ್ನು ಇರಿಸಿ, ವಾಹನಗಳ ಸಂಚಾರ ಆರಂಭಿಸಿದ್ದಾರೆ. ರಸ್ತೆ ನಿರ್ಬಂಧಕ್ಕಾಗಿ ರಸ್ತೆ ಅಗೆದು, ಮುಳ್ಳು ಹಾಕಿರುವ ತಮ್ಮ ಸಮ್ಮುಖದಲ್ಲೇ ಜನರು ನಿರ್ಬಂಧ ಮೀರಿ ಅಡ್ಡ ದಾರಿಯಲ್ಲಿ ಓಡಾಡುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳುವ ಬದಲು, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳ ಆದೇಶ ಪಾಲನೆಯ ಪ್ರಕ್ರಿಯೆ ಮುಗಿಸಲು ರಸ್ತೆಗೆ ಕಂದಕ ತೋಡಿ, ಮುಳ್ಳುಹಾಕಿ ಕರ್ತವ್ಯ ವಿಮುಖರಾಗಿದ್ದಾರೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.