ವರದಿ: ಬಸವರಾಜ ಹೊಂಗಲ್
ಧಾರವಾಡ: ಸಿಹಿ ತಿನಿಸು ತಿಂಡಿಗಳ ಅಂಗಡಿಗಳಿಗೆ ಮುಗಿಬಿದ್ದ ಜನ, ಕಟ್ಟಡ ಕಾರ್ಯಗಳ ಸರಕು ಸರಂಜಾಮುಗಳ ಭರ್ಜರಿ ಖರೀದಿ, ತುಂಬಿ ತುಳುಕಿದ ಕಿರಾಣಿ ವ್ಯಾಪಾರಿಗಳ ಗಲ್ಲಾಪೆಟ್ಟಿಗೆ, ಬೆಳ್ಳಂಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಜನರ ಓಡಾಟ. ಮತ್ತದೇ ಮಾಸ್ಕ್ ಇಲ್ಲದ ಪ್ರಯಾಣ, ಅದಕ್ಕೊಂದಿಷ್ಟು ದಂಡ, ಸರ್ಕಾರದ ಎಚ್ಚರಿಕೆ ಕ್ರಮಗಳಿಗಿಲ್ಲ ಕವಡೆಕಾಸಿನ ಕಿಮ್ಮತ್ತು.
ಹೌದು, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಹಳ್ಳಿಗಳಲ್ಲಿ ಮನೆಗೊಬ್ಬರು ಕೊರೊನಾ ಅಂಟಿಸಿಕೊಂಡು ಅಂತು ಇಂತೂ ಗುಣಮುಖರಾಗಿ ಹೊಲದ ಹಂಗಾಮಿಗೆ ನೇಗಿಲು ಹೊತ್ತಿದ್ದಾರೆ. ಆದರೆ ನಗರ ಪ್ರದೇಶದಲ್ಲಿ ಕಡಿಮೆ ಇದ್ದ ಕೊರೊನಾ ಸೋಂಕು ಮತ್ತೆ ಸದ್ದಿಲ್ಲದೇ ಮೇಲೆರುತ್ತಿದ್ದು, ಈ ಸಂದರ್ಭದಲ್ಲಿ ಲಾಕ್ ಡೌನ್ ಸಡಿಲಿಕೆ ಜಿಲ್ಲೆಯ ಜನರಿಗೆ ಮತ್ತೂಂದು ಗಂಡಾಂತರ ತಂದೊಡ್ಡುವುದೇ? ಎನ್ನುವ ಸಂಶಯ ಕಾಡುತ್ತಿದೆ.
ಸತತ ಒಂದೂವರೆ ತಿಂಗಳಿನಿಂದ ಕಟ್ಟುನಿಟ್ಟಿನ ಲಾಕ್‌ಡೌನ್ ಮಾಡಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ದಿಗ್ಬಂಧನ ಹಾಕುವ ಪ್ರಯತ್ನ ಮಾಡಲಾಗಿದ್ದು, ಈಗ ಒಂದು ಹಂತಕ್ಕೆ ಬಂದಿದೆ. ಆದರೆ ಲಾಕ್‌ಡೌನ್ ತೆರವು ಬದಲು ಇನ್ನೊಂದು 15 ದಿನಗಳ ವರೆಗೂ ವಿಸ್ತರಣೆ ಮಾಡಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಎರಡಂಕಿಗೆ ಇಳಿದ ಮೇಲೆ ಅನ್‌ಲಾಕ್ ಮಾಡುವುದು ಸೂಕ್ತವಿತ್ತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪಾಸಿಟಿವಿಟಿ ದರ ಭರತನಾಟ್ಯ: ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ದಿನಕ್ಕೊಂದು ಸೂಚ್ಯಾಂಕದಲ್ಲಿ ಬಂದು ನಿಲ್ಲುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಶೇ.5ಕ್ಕಿಂತಲೂ ಹೆಚ್ಚಾಗಿತ್ತು. ಮುಂದೆ ಬರೀ 15 ದಿನಗಳಲ್ಲಿ ಶೇ.20ಕ್ಕಿಂತಲೂ ಅಧಿಕವಾಗಿ ಜನರು ಆಮ್ಲಜನಕಕ್ಕೂ ಪರದಾಟ ನಡೆಸುವಂತಾಯಿತು. ಇದೀಗ ಜಿಲ್ಲೆಯಲ್ಲಿ ಆನ್‌ಲಾಕ್ ಮಾಡಿದ್ದರೂ ಅವಳಿ ನಗರದಲ್ಲಿನ ಪಾಸಿಟಿವಿಟಿ ದರ ಶೇ.16ರಷ್ಟಿದೆ. ಕಾರಣ ಇಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶೇ.2.9ರಷ್ಟಿದೆ. ಅಲ್ಲದೇ ಪಾಸಿಟಿವಿಟಿ ದರ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಭರತನಾಟ್ಯವಾಡುತ್ತಿದ್ದು, ನಗರದಿಂದ ಹಳ್ಳಿಗೆ, ಹಳ್ಳಿಗಳಿಂದ ನಗರಕ್ಕೆ ಮೇಲಿಂದ ಮೇಲೆ ವ್ಯತ್ಯಾಸವಾಗುತ್ತ ಸಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ನಗರಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗಿತ್ತು. ಹಳ್ಳಿಗಳಲ್ಲಿ ಕಡಿಮೆ ಇತ್ತು. ಮುಂದೆ ಕೇವಲ 20 ದಿನಗಳಲ್ಲಿ ಹಳ್ಳಿಗಳಲ್ಲಿ ವಿಪರೀತ ಪ್ರಮಾಣದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಯಿತು. ನಗರಗಳಲ್ಲಿ ಸ್ಥಿರವಾಗಿತ್ತು. ಇದೀಗ ಜೂನ್ ಮೊದಲ ವಾರದಲ್ಲಿ ಹಳ್ಳಿಗಳಲ್ಲಿ ಕೊರೊನಾ ಸಂಪೂರ್ಣ ಹಿಡಿತಕ್ಕೆ ಬಂದಿದ್ದು, ನಗರ ಪ್ರದೇಶದಲ್ಲಿಯೇ ಮತ್ತೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ.