ಗುಡಿಬಂಡೆ (ಚಿಕ್ಕಬಳ್ಳಾಪುರ): ಕೋವಿಡ್-19 ಸೋಂಕು ಇಲ್ಲದಿದ್ದರು ವ್ಯಕ್ತಿಯೊಬ್ಬರನ್ನು ಕ್ವಾರೆಂಟನ್ ಗೆ ಕರೆದುಕೊಂಡು ಹೋಗಿ ಅವರ ಮನೆಯನ್ನು ಸೀಲ್ ಡೌನ್ ಮಾಡಿರುವುದನ್ನು ಖಂಡಿಸಿ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂದೆ ಕುಟುಂಬದವರು ಪ್ರತಿಭಟನೆ ನಡೆಸಿದ ಪ್ರಸಂಗ ಶನಿವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ಬಾಪೂಜಿನಗರದ ವ್ಯಕ್ತಿಯೊಬ್ಬರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ಅವರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಆದರೆ ವ್ಯಕ್ತಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿಲ್ಲ. ಹೀಗಾಗಿ ಪಾಸಿಟಿವ್ ಬರಲು ಹೇಗೆ ಸಾಧ್ಯ ಎಂದು ವ್ಯಕ್ತಿಯ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಆದರೆ ಆರೋಗ್ಯ ಇಲಾಖೆ ಯಾರು ಮಾತು ಕೇಳದ ಕ್ವಾರಂಟೈನ್‌ಗೆ ಬಾರದೇ ಹೋದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ.
ನಗೆಟೀವ್ ವರದಿ
ಕೊನೆಗೆ ವ್ಯಕ್ತಿಯ ಒತ್ತಾಯದ ಮೇರೆಗೆ ಆರೋಗ್ಯ ಇಲಾಖೆ ಮತ್ತೊಮ್ಮೆ ರ್ಯಾಬಿಟ್ ಪರೀಕ್ಷೆ ಗೆ ಒಳಪಡಿಸಿದಾಗ ನೆಗೆಟಿವ್ ವರದಿ ಬಂದಿದ್ದು ಮತ್ತೆ ಅವರನ್ನು ಮನೆಗೆ ವಾಪಸ್ ಹೋಗುವಂತೆ ಸೂಚಿಸಿದ್ದಾರೆ. ಆದರೆ ಕುಟುಂಬದದವರು ಕೋವಿಡ್ ಸೋಂಕು ಇಲ್ಲದಿದ್ದರು ಸಹ ಕರೆತಂದು ನಮ್ಮ ಮನೆಯನ್ನು ಸಿಲ್ ಡೌನ್ ಮಾಡಿ ಈಗ ಇಲ್ಲ ಎಂದು ಹೇಳುತ್ತಿದ್ದೀರಿ. ಈಗ ನಮಗೆ ಅವಮಾನವಾಗಿದ್ದು ಬೇರೆಯವರು ನಮ್ಮನ್ನು ಮಾತನಾಡಲು ಭಯಪಡುತ್ತಿದ್ದಾರೆಂದು ಆರೋಪಿಸಿ ಆರೋಗ್ಯ ಇಲಾಖೆ ಕಾರ್ಯವೈಖರಿ ವಿರುದ್ದ ಪ್ರತಿಭಟನೆ ನಡೆಸಿದರು.
ವೈದ್ಯಾಧಿಕಾರಿಗಳಿಗೆ ಅ ವರದಿ ನನ್ನದಲ್ಲ ಎಂದು ತಿಳಿಸಿದರೂ ಅವರು ನನ್ನ ಮೇಲೆ ದೌರ್ಜನ್ಯ ಮಾಡಿ ನೀನು ಬರದಿದ್ದರೆ ನಿನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೆವೆಂದು ಬೆದರಿಸಿದ್ದಾರೆಂದು ಕ್ವಾರಂಟೈನ್‌ಗೆ ಕರೆದಿದ್ದ ವ್ಯಕ್ತಿ ಆರೋಗ್ಯ ಇಲಾಖೆ ವಿರುದ್ದ ಕಿಡಿಕಾರಿದರು. ನಂತರ ಸ್ಥಳಕ್ಕೆ ಗುಡಿಬಂಡೆ ಆರಕ್ಷಕ ಉಪ ನಿರೀಕ್ಷಕ ಬೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ಮನೆಗೆ ಕಳುಹಿಸಲಾಯಿತು.