ಕೆರೂರ : ಕೋವಿಡ್ ಸೋಂಕು ಜಿಲ್ಲೆಯಲ್ಲಿ ಜೂನ ಮಾಹೆಯಲ್ಲಿ ಕ್ರಮೇಣ ತಗ್ಗುತ್ತಿರುವ ಕಾರಣ , ಇದೇ 14ರಿಂದ ಲಾಕಡೌನ ಸಡಿಲಿಕೆ ಘೋಷಣೆಯ ಬೆನ್ನಲ್ಲೇ ಇಲ್ಲಿಗೆ ಸಮೀಪದ ನೀರಬೂ ದಿಹಾಳ ಗ್ರಾಮದಲ್ಲಿ ಒಂದೇ ಕುಟುಂಬದ 11 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ನೀರಬೂದಿಹಾಳ ಗ್ರಾಮದ ಕುಟುಂಬವೊಂದರ ೫೮, ೪೧, ೨೦, ೨೦ ವರ್ಷದ ಪುರುಷರು, ೧೨ ವರ್ಷದ ಬಾಲಕ ಹಾಗೂ ೪೫, ೪೨, ೩೪, ೨೨, ೧೮ ವರ್ಷದ ಮಹಿಳೆಯರು ಸೇರಿ ೧೦ ವರ್ಷದ ಬಾಲಕಿಗೂ ಸಹ ಕೋವಿಡ್ ಸೋಂಕು ದೃಢಪಟ್ಟಿದೆ.
ಅಂತ್ಯಕ್ರಿಯೆ ಸೋಂಕು : ಸೋಂಕಿತರ ಮನೆಯವರು ದೂರದ ಹುಬ್ಬಳ್ಳಿಯಲ್ಲಿ ತಮ್ಮ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿದ್ದಾಗ ಕೋವಿಡ್ ಸೋಂಕು ಹರಡಿರುವ ಶಂಕೆ ಅಧಿಕಾರಿಗಳಿಂದ ವ್ಯಕ್ತವಾಗಿದ್ದು ಗ್ರಾಮಸ್ಥರು ಭಯ ಪಡದೇ ಜಾಗೃತೆ ವಹಿಸಬೇಕು.ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆಗೆ ಮುಂದಾಗಿ ಜೊತೆಗೆ ಕೋವಿಡ್ ಲಸಿಕೆ ತಪ್ಪದೇ ಹಾಕಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಗ್ರಾಮದಲ್ಲಿ ಮೇ ತಿಂಗಳು ಹಿರಿಯ ಮುಖಂಡರು ಸೇರಿ ಹಲವರು ಕೋವಿಡ್ ಸೋಂಕಿಗೆ ಬಲಿ ಯಾಗಿದ್ದು ಸಧ್ಯ ಗ್ರಾಮಸ್ಥರಲ್ಲಿ ಆತಂಕ ಕಂಡು ಬಂದಿದೆ.
ಕೋವಿಡ್ ವರದಿ ದೃಢಪಟ್ಟ ನಂತರ ಕೆರೂರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಕಂದಾಯ ಇಲಾಖೆ ಇತರೆ ಸಿಬ್ಬಂದಿ ಸೋಂಕಿತರ ಮನೆಗೆ ತೆರಳಿ, ಅವರ ಮನವೊಲಿಸುವ ಮೂಲಕ ಬಾದಾಮಿ ಪಟ್ಟಣದ ಶ್ರೀ ವೀರಪುಲಕೇಶಿ ಆಯುರ್ವೇದ ಮಹಾವಿದ್ಯಾಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ ಚಿಕಿತ್ಸೆಗಾಗಿ ತುರ್ತು ಚಿಕಿತ್ಸಾ ವಾಹನದಲ್ಲಿ ಕಳುಹಿಸಿದ್ದಾರೆ.
ಈ ವೇಳೆ ಕೆರೂರ ಉಪ ತಹಶೀಲ್ದಾರ ರಾಜಶೇಖರ ಸಾತಿಹಾಳ, ಕಂದಾಯ ನಿರೀಕ್ಷಕ ಎ.ಬಿ. ಮಲಕನವರ, ಆಸ್ಪತ್ರೆಯ ಹಿ.ಆ. ನಿರೀಕ್ಷಕ ಅಶೋಕ ಜತ್ತಿ, ತಿಪ್ಪಣ್ಣ ಕೊಳ್ಳಿ, ಏಕನಾಥ ಇರಕಲ್, ಮೇಘಾ ದೇಸಾಯಿ ಇತರರು ಭಾಗವಹಿಸಿದ್ದರು.
ಮತ್ತಿಕಟ್ಟಿ ವ್ಯಕ್ತಿ ಸಾವು : ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಮೀಪದ ಮತ್ತಿ ಕಟ್ಟಿ ಗ್ರಾಮದ ೪೫ ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟು ೧೫ ದಿನಗಳ ಕಾಲ ಬಾಗಲಕೋಟ ಆಸ್ಪತ್ರೆಯಲ್ಲಿನ ಚಿಕಿತ್ಸೆ ಫಲಿಸದೇ ಭಾನುವಾರ ಸಾವಿಗೀಡಾಗಿದ್ದು ಗ್ರಾಮದಲ್ಲೇ ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ.