ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಖಾಸಗಿ ಆಯುರ್ವೆದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿ ವಿಭಾಗಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪಾಲಿಕೆಯ ವಲಯ ಅಧಿಕಾರಿಗಳು ಆಯುರ್ವೇದ ಕಾಲೇಜ್‌ನಲ್ಲಿ ಕೊರೊನಾ ನಿಯಂತ್ರಣವಾಗುವವರೆಗೆ ಹಾಗೂ ಸ್ಯಾನಿಟೈಜರ್ ಆಗುವವರೆಗೆ ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿ ವಿಭಾಗಗಳನ್ನು ತಾತ್ಕಾಲಿಕವಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಯೋಧ್ಯೆಯಲ್ಲಿ ನ.27-28ರಂದು ನಡೆದಿದ್ದ ಆಯುರ್ವೆದ ಸಮಾವೇಶದಲ್ಲಿ ಶಿಕ್ಷಕರು ಸೇರಿ 36 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನ. 30ರಂದು ನಗರಕ್ಕೆ ಆಗಮಿಸಿದ್ದರು. ಸಮಾವೇಶದಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ನಗರಕ್ಕೆ ಬಂದ ನಂತರ ಕ್ವಾರಂಟೈನ್‌ಲ್ಲಿದ್ದರು. ಸಂಸ್ಥೆಯ ನಿರ್ದೇಶನದ ಮೇರೆಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದರು. ಅವರಲ್ಲಿ ಮೂವರು ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢವಾಗಿತ್ತು. ಕ್ವಾರಂಟೈನ್ ನಲ್ಲಿರುವ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದೆ.
ಖಾಸಗಿ ಆಯುರ್ವೇದ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಾಲಿಕೆಯ ವಲಯಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಆಯುರ್ವೇದ ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿ ವಿಭಾಗಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಾರೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ “ಉದಯವಾಣಿ’ಗೆ ತಿಳಿಸಿದರು.