ಕೊಪ್ಪಳ: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಆರಕ್ಷಕ ಸೇರಿದಂತೆ 23 ಜನರಿಗೆ ರವಿವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು 131ಕ್ಕೆ ಏರಿಕೆಯಾದಂತಾಗಿದೆ.
ಮೊದಲೆಲ್ಲ ಕೊಪ್ಪಳ ಜಿಲ್ಲೆಯಲ್ಲಿ ಅಷ್ಟೊಂದು ಸೋಂಕು ಇಲ್ಲ ಎಂದು ಜನತೆ ನೆಮ್ಮದಿಯಿಂದಲೇ ಜೀವನ ನಡೆಸುತ್ತಿದ್ದರು. ಆದರೆ ಕ್ರಮೇಣ ಸೋಂಕಿತರ ಸಂಖ್ಯೆ ಹೆಚ್ಚಿತ್ತಿದ್ದು, ರವಿವಾರ ಬರೊಬ್ಬರಿ 23 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಪೊಲೀಸ್ ಪೇದೆಗೆ ಸೋಂಕು: ಇನ್ನೂ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೇದೆಗೆ ಸೋಂಕು ದೃಢಪಟ್ಟಿದೆ. ಈತನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಈಚೆಗೆ ಬೆಂಗಳೂರಿಗೂ ತೆರಳಿ ವಾಪಸ್ಸಾಗಿದ್ದನು. ಅಲ್ಲದೇ, ಬಳ್ಳಾರಿ ಜಿಲ್ಲೆಗೆ ತಮ್ಮ ಸಹೋದರನ ಮದುವೆಗೂ ತೆರಳಿ ವಾಪಸ್ಸಾಗಿದ್ದನು. ಆದರೆ ರವಿವಾರ ಈತನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪೇದೆಗೆ ಸೋಂಕು ದೃಢಪಟ್ಟಂತಾಗಿದೆ. ಈ ಮಾಹಿತಿ ತಿಳಿದ ತಕ್ಷಣವೇ ಜಿಲ್ಲಾಡಳಿತ ನಗರ ಠಾಣೆಯನ್ನು ಸೀಲ್‌ಡೌನ್ ಮಾಡಿದೆ. ಅಲ್ಲದೇ ಪೇದೆಯೊಂದಿಗೆ ಕರ್ತವ್ಯದಲ್ಲಿದ್ದ ಸಿಪಿಐ, ಪಿಎಸ್‌ಐ ಸೇರಿದಂತೆ 54 ಜನರನ್ನು ಪ್ರಾಥಮಿಕ ಸಂಪರ್ಕಿರೆಂದು ಪರಿಗಣಿಸಲಾಗಿದೆ.
ಇನ್ನೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ. ಜಿಲ್ಲಾಡಳಿತವು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೂ ಹೆಚ್ಚಿನ ನಿಗಾ ಇರಿಸಿದೆ. ಆಸ್ಪತ್ರೆಯಿಂದ 12 ಜನರ ಬಿಡುಗಡೆ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 12 ಜನರು ಗುಣಮುಖರಾದ ಹಿನ್ನೆಲೆಯಲ್ಲಿ ವೈದ್ಯರ ತಂಡ ಅವರನ್ನು ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿತು. ಜಿಲ್ಲೆಯಲ್ಲಿ 131 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ರವಿವಾರ 12 ಜನ ಸೇರಿದಂತೆ ಜಿಲ್ಲೆಯಲ್ಲಿ 77 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.