ಕೊಪ್ಪಳ: ಜಿಲ್ಲೆಯಲ್ಲಿ ಶನಿವಾರ ಬರೊಬ್ಬರಿ 44 ಜನರಿಗೆ ಕೋವಿಡ್ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಇದು ನಿಜಕ್ಕೂ ಜನರಲ್ಲಿ ಆತಂಕವನ್ನುಂಟು ಮಾಡಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 11 ಜನರು ಬಿಡುಗಡೆಯಾಗಿದ್ದಾರೆ. ಓರ್ವ ಮಹಿಳೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಪ್ರತಿದಿನವೂ ಹತ್ತಾರು ಕೋವಿಡ್ ಕೇಸ್ ಜಿಲ್ಲೆಯಲ್ಲಿ ದೃಢಪಡುತ್ತಿರುವುದರಿಂದ ಜನರ ನೆಮ್ಮದಿ ಹಾಳಾಗಿದೆ. ಜಿಲ್ಲೆಯಲ್ಲಿ ಮೊದಲೆಲ್ಲ 20ರ ಸರಾಸರಿ ಸಂಖ್ಯೆಯಲ್ಲಿದ್ದ ಕೋವಿಡ್ ಸೋಂಕು ಈಗ ಬರೋಬ್ಬರಿ 44 ಜನರಿಗೆ ಸೋಂಕು ದೃಢಪಟ್ಟಿದೆ. ಇದೊಂದು ದೊಡ್ಡ ಆಘಾತವೆಂದರೂ ತಪ್ಪಾಗಲಾರದು. ಜಿಲ್ಲೆಯಲ್ಲಿಯೇ ಕೊರೊನಾ ಟೆಸ್ಟ್ ಸೆಂಟರ್ ಆರಂಭವಾಗಿರುವುದರಿಂದ ಪ್ರತಿನಿತ್ಯ ನೂರಕ್ಕೂ ಹೆಚ್ಚು ಜನರ ಸ್ವಾಬ್ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ದಿನೇ ದಿನೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೇ ಸರ್ಕಾರ ಲಾಕ್ ಡೌನ್ ತೆರವು ಮಾಡಿದ ಬಳಿಕವಂತೂ ಅನ್ಯ ಜಿಲ್ಲೆ, ರಾಜ್ಯಗಳಿಂದ ಜನರು ನಿರ್ಭಯವಾಗಿಬಂದು ಮನೆ ಸೇರುತ್ತಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದರೆ ಇನ್ನೂ ಕೆಲವರು ನಮಗ್ಯಾಕೇ ಅದೆಲ್ಲ ಎಂದು ಮೂಗು ಮುರಿಯುತ್ತಿದ್ದು, ಇದರಿಂದಲೇ ಸೋಂಕಿನ ಪ್ರಮಾಣ ದ್ವಿ ಶತಕ ದಾಟಿದೆ.
ಆಸ್ಪತ್ರೆಯಿಂದ 11 ಜನರ ಬಿಡುಗಡೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆಯೂ ನೂರರ ಗಡಿ ದಾಟಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೋಂಕಿತರು ಬೇಗ ಗುಣಮುಖರಾಗಿ ಮನೆ ಸೇರುತ್ತಿದ್ದು,ಶನಿವಾರ 11 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಇದುವರೆಗೂ ನೂರು ಜನರು ಆಸ್ಪತ್ರೆಯಿಂದ ಬಿಡುಗಡೆಯಾದ ಮಾಹಿತಿ ಲಭ್ಯವಾಗಿದೆ.
ಸಾವಿನ ಸಂಖ್ಯೆ ಆರಕ್ಕೆ: ಜಿಲ್ಲೆಯಲ್ಲಿ ಕೋವಿಡ್ ದಿಂದಾಗಿ ಸಾವಿನ ಸಂಖ್ಯೆಯು ಹೆಚ್ಚುತ್ತಿದೆ. ಈಚೆಗೆ ಐವರು ಸೋಂಕಿನಿಂದ ಬಳಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಶನಿವಾರ 61 ವರ್ಷದ ಮಹಿಳೆ ಮೃತಪಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆಯೂ ಆರಕ್ಕೆ ಏರಿಕೆಯಾಗಿದೆ. ಇದು ಜನರಲ್ಲಿ ಆತಂಕ ಮೂಡಿಸುತ್ತಿದೆ.
2224 ಜನರ ವರದಿ ಬಾಕಿ: ಇನ್ನೂ ಜಿಲ್ಲಾಡಳಿತ ಅನ್ಯ ಜಿಲ್ಲೆ, ರಾಜ್ಯ ಸೇರಿದಂತೆ ವಿವಿಧ ಹೈರಿಸ್ಕ್ ಏರಿಯಾದಿಂದ ಆಗಮಿಸಿದ ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡುತ್ತಿದ್ದು, ಈ ವರೆಗೂ 14284 ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಇವರಲ್ಲಿ 12060 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 2224 ಜನರ ವರದಿ ಬರುವುದು ಬಾಕಿಯಿದೆ.