ಬೆಂಗಳೂರು:ಕೆಮ್ಮುತ್ತೀರಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಗೆ ತಿಳಿ ಹೇಳಲು ಹೋಗಿ ಬೈಸಿಕೊಂಡಿದ್ದ ರಾಮನಗರ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಎಂಬುವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಬಂದ ಶಿವಕುಮಾರ್ ಕ್ವಾರಂಟೈನ್ ಆಗಬೇಕೆಂದು ಸರಕಾರ ಪರೋಕ್ಷ ಒತ್ತಡ ಹೇರಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆಮ್ಮುತ್ತಿದ್ದ ಡಿಕೆಶಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಸೂಕ್ತ ಎಂದು ಎಡಿಸಿ ಜವರೇಗೌಡ ಮನವಿ ಮಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಸೋಮವಾರ ಬೆಳಗ್ಗೆ 11.3 ರ ಸುಮಾರಿಗೆ ಜವರೇಗೌಡ ಅವರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನಕುಮಾರ್ ದೃಢಪಡಿಸಿದ್ದಾರೆ. ಹೀಗಾಗಿ ಕೋವಿಡ್ ನಿಯಮ ಪ್ರಕಾರ ಡಿ.ಕೆ.ಶಿವಕುಮಾರ್ ಕ್ವಾರಂಟೈನ್ ಆಗಬೇಕೆಂದು ಸರಕಾರ ಪರೋಕ್ಷ ಒತ್ತಡ ಹೇರಲಾರಂಭಿಸಿದೆ.
ಕೋವಿಡ್ ಅಂಟಿಸಲು ಬಂದಿದ್ದರು:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಡಿ.ಕೆ.ಸುರೇಶ್, ಶಿವಕುಮಾರ್ ಅವರಿಗೆ ಸೋಂಕು ಅಂಟಿಸುವುದಕ್ಕಾಗಿಯೇ ಜವರೇಗೌಡರನ್ನು ಕಳುಹಿಸಿದ್ದರು. ರಾಮನಗರ ಜಿಲ್ಲಾಧಿಕಾರಿ ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರ ಜತೆ ಸಂಪರ್ಕ ದಲ್ಲಿದ್ದ ಜವರೇಗೌಡರಿಗೆ ಮೊದಲೇ ಸೋಂಕು ಇತ್ತು.
ಉದ್ದೇಶಪೂರ್ವಕವಾಗಿ ಸರಕಾರ ಕೊರೋನಾ ಅಂಟಿಸುವ ಒ್ರಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ್, ನನ್ನನ್ನು ಕ್ವಾರಂಟೈನ್ ಗೆ ಕಳುಹಿಸಲು ಸರಕಾರ ಈ ರೀತಿ ಮಾಡುತ್ತಿದೆ. ಪಾದಯಾತ್ರೆಯಿಂದ ಸರಕಾರಕ್ಕೆ ಭಯ ಬಂದಿದೆ. ಮುಂದಿನ ಮೂರು ದಿನ ಮೌನ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದರು.