Advertisement

ಆಸ್ಪತ್ರೆಯಲ್ಲಿ ಸಿಗದ ಬೆಡ್‌: ಮನೆಯಲ್ಲೇ ನರಳಿ ಮೃತಪಟ್ಟ ಮಹಿಳೆ,BBMP ವಿರುದ್ಧ ಮಕ್ಕಳ ಆಕ್ರೋಶ

09:21 PM Apr 28, 2021 | Team Udayavani |

ಬೆಂಗಳೂರು: ವಾರದ ಹಿಂದೆ ಕೊರೊನಾ ಸೋಂಕಿನಿಂದ ಅಜ್ಜಿ ಸಾವು. ಇದಾದ ಕೆಲವೇ ದಿನಗಳಲ್ಲಿ ತಾಯಿ ಮರಣ. ಈಗ ಮಗಳೂ ಸಹ ಕೊರೊನಾದಿಂದ ಮೃತಪಟ್ಟಿರುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

Advertisement

ಹೆಂಡತಿಯನ್ನು ನೆನೆದು ಪತಿ ಮತ್ತು ತಾಯಿಯನ್ನು ನೆನೆದು ಹೆಣ್ಣು ಮಕ್ಕಳು ಕಣ್ಣೀರಿಸುವಂತಾಗಿದೆ.

ಮಹಾಮಾರಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿತ್ಯ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುಗತ್ತಿಯಲ್ಲಿದೆ. ಆದರೆ, ಸೋಂಕಿಗೆ ಬಲಿಯಾದವರ ಕುಟುಂಬಸ್ಥರ ನೋವು ಮಾತ್ರ ಕೇಳುವವರಿಲ್ಲ. ಇಂಥಹದ್ದೇ ಒಂದು ಹೃದಯವಿದ್ರಾವಕ ಘಟನೆ ನಗರದ ವಿದ್ಯಾರಣ್ಯಪುರದ ಸಿಂಗಾಪುರದಲ್ಲಿ ನಡೆದಿದೆ.

ಏಪ್ರಿಲ್‌ 26ರಂದು 31 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ನಿನ್ನೆ ಮಹಿಳೆಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದ್ದರಿಂದ ಪತಿ ಮತ್ತು ಮಗಳು ಮಹಿಳೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಅಲೆದಾಡಿದ್ದಾರೆ. ಎರಡು – ಮೂರು ಆಸ್ಪತ್ರೆಗಳನ್ನು ಅಲೆದರೂ, ಐಸಿಯು ಹಾಸಿಗೆ ಸಿಕಿಲ್ಲ. ಹೀಗಾಗಿ ಮನೆಗೆ ವಾಪಸ್‌ ಕರೆತಂದಿದ್ದರು. ರಾತ್ರಿ 10 ಗಂಟೆಗೆ ಮನೆಯಲ್ಲಿ ಸೋಂಕಿತ ಮಹಿಳೆ ಉಸಿರಾಡಲು ಆಗದೆ, ಚಿಕಿತ್ಸೆಯೂ ಇಲ್ಲದೆ ನರಳಿ ನರಳಿ ಪ್ರಾಣಬಿಟ್ಟಿದ್ದಾರೆ.

ಇದನ್ನೂ ಓದಿ :ಲಸಿಕೆ ಕೊರತೆ : ಮೇ 1 ರಿಂದ ಉಚಿತ ಲಸಿಕೆ ಅಭಿಯಾನ ಅಸಾಧ್ಯವೆಂದ ಮಹಾರಾಷ್ಟ್ರ

Advertisement

ಮಕ್ಕಳ ನೋವು ಕೇಳುವವರಿಲ್ಲ
ತನ್ನ ಕೈಲಾದಷ್ಟು ಪ್ರಯತ್ನ ಪಟ್ಟರೂ ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪತ್ನಿಯ ಸಾವು ಕಣ್ಣಾರೆ ಕಂಡ ಗಂಡ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ನೆರವಿಗೆ ಯಾರೂ ಇಲ್ಲದೇ ಮೃತಳ ಹೆಣ್ಣುಮಕ್ಕಳು ಕಂಗಾಲಾಗಿದ್ದಾರೆ. ಅಮ್ಮ ಕಣ್ಣು ಮುಂದೆ ಸಾವನ್ನಪ್ಪಿದ್ದನ್ನು ನೋಡಿ ಮಕ್ಕಳು ದಿಕ್ಕು ತೋಚದಂತಾಗಿದ್ದಾರೆ. ಬಳಿಕ, ವಿದ್ಯಾರಣ್ಯಪುರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹ ರವಾನಿಸಲು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ತಾಯಿಯನ್ನು ಕಳೆದುಕೊಂಡ ಮಕ್ಕಳ ನೋವು ಕೇಳುವವರಿಲ್ಲ. ಮನೆ ಬಳಿ ತೆರಳಲು ಅಕ್ಕಪಕ್ಕದವರು ಹಿಂದೇಟು ಹಾಕಿದ್ದಾರೆ. ಹೀಗಾಗಿ ತಾಯಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿದ್ದಾರೆ.

ಆಸ್ಪತ್ರೆ ಬೇಡ ಎಂದು ಪಟ್ಟು ಹಿಡಿದಿದ್ದ ಪತ್ನಿ
“ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಮ್ಮ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಸಾವನ್ನಪ್ಪಿದರು. ನಮ್ಮ ಅತ್ತೆ ಸಾವನ್ನಪ್ಪಿದ ಬಳಿಕ ನನ್ನ ಪತ್ನಿಗೆ ಕೊರೊನಾ ದೃಢವಾಗಿತ್ತು. ಆದರೆ, ತನ್ನ ತಾಯಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದಿರುವುದನ್ನು ಕಂಡಿದ್ದ ಪತ್ನಿ, ನಾನು ಆಸ್ಪತ್ರೆಗೆ ದಾಖಲಾಗುವುದಿಲ್ಲ. ಅಲ್ಲಿಗೆ ಹೋದರೆ ನನ್ನನ್ನೂ ಸಾಯಿಸಿಬಿಡುತ್ತಾರೆ ಎಂದು ಪಟ್ಟು ಹಿಡಿದಿದ್ದಳು. ಕಳೆದ ಗುರುವಾರದಿಂದ ಪತ್ನಿ ಚಿಕಿತ್ಸೆಗೆ ಐಸಿಯು ಬೆಡ್‌ಗಾಗಿ ಅಲೆದಾಡಿದೆ. ಎಲ್ಲೂ ಬೆಡ್‌ ಸಿಗಲಿಲ್ಲ. ನಿನ್ನೆ ರಾತ್ರಿ ಉಸಿರಾಟ ತೊಂದರೆ ಹೆಚ್ಚಾಗಿ, ನಮ್ಮನ್ನು ಬಿಟ್ಟು ಹೋದಳು’ ಎಂದು ಗಂಡ ಕಣ್ಣೀರಿಟ್ಟರು.

ಬಿಬಿಎಂಪಿ ತಾಯಿಯ ಪ್ರಾಣ ವಾಪಸ್‌ ಕೊಡುತ್ತಾ?:
“ಎಲ್ಲರಿಗೂ ಕರೆ ಮಾಡಿದ್ದೆವು ಸರ್‌. ಯಾರು ನಮ್ಮ ಸಹಾಯಕ್ಕೆ ಬರಲಿಲ್ಲ. ಅಮ್ಮನಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿ ಇನ್ನೇನು ಸಾವನ್ನಪ್ಪುವ ಸ್ಥಿತಿಗೆ ತಲುಪಿದ್ದಾರೆ ಎಂದಾಗಲೂ ಆ್ಯಂಬುಲೆನ್ಸ್‌ ಸಿಗಲಿಲ್ಲ. ಎರಡು ಗಂಟೆಗಳ ಕಾಲ ಕರೆ ಮಾಡಿದರೂ, ಬಿಬಿಎಂಪಿಯವರು ನಮಗೆ ಹೇಳಬೇಕು. ಇಲ್ಲವಾದರೆ ನಾವು ಬರಲ್ಲ ಎಂದರು. ಬಿಬಿಎಂಪಿಯವರು ನಮ್ಮ ತಾಯಿಯ ಪ್ರಾಣ ಕೊಡುತ್ತಾರಾ ಸರ್‌.. ಅವರು ನಮಗೆ ಪ್ರಾಣ ವಾಪಸ್‌ ಕೊಡುವ ಹಾಗಿದ್ರೆ ಹೇಳಲಿ, ಅವರು ಬರುವ ತನಕ ಕಾಯುತ್ತಿದ್ದೆವು. ಈಗ ನಮ್ಮ ಅಮ್ಮನ ಪ್ರಾಣ ವಾಪಸ್‌ ಬರುತ್ತಾ ಸರ್‌..’ ಎಂದು ತಾಯಿಯನ್ನು ಕಳೆದುಕೊಂಡ ಮಗಳ ಆಕ್ರಂದನ ಮುಗಿಲುಮಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next