ಮುಂಬಯಿ: ಮುಂಬಯಿಗೆ ಕೋವಿಡ್ ಲಸಿಕೆಗಳನ್ನು ಪೂರೈಸಲು ಜಾರಿಗೊಳಿಸಿದ ಜಾಗತಿಕ ಟೆಂಡರ್‌ಗೆ ಬಂದ ಎಲ್ಲ 9 ಪ್ರಸ್ತಾವಗಳನ್ನು ಅಗತ್ಯ ದಾಖಲೆಗಳ ಕೊರತೆಯಿಂದ ತಿರಸ್ಕರಿಸಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ.
ಪಾಳಿಕೆ ಈಗ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ವಿತರಕರಾದ ಡಾ| ರೆಡ್ಡಿ ಪ್ರಯೋಗಾಲಯಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಜೂನ್ ಅಂತ್ಯದ ಮೊದಲು ಪ್ರಾಯೋಗಿಕ ಆಧಾರದ ಮೇಲೆ ಕೆಲವು ಪ್ರಮಾಣಗಳನ್ನು ಪೂರೈಸಲು ಸಂಸ್ಥೆ ಒಪ್ಪಿಕೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.ಮೇ 12ರಂದು ನಾಗರಿಕ ಸಂಸ್ಥೆ ಒಂದು ಕೋಟಿ ಲಸಿಕೆ ಪ್ರಮಾಣವನ್ನು ಪೂರೈಸಲು ಜಾಗತಿಕ ಟೆಂಡರ್ ಅನ್ನು ಆಹ್ವಾನಿಸಿತ್ತು.
ಬಳಿಕ ಇದನ್ನು ಎರಡು ಬಾರಿ ವಿಸ್ತರಿಸಿದ ಅನಂತರ 10 ಮಂದಿ ವಿತರಕರು ಲಸಿಕೆ ವಿತರಣೆಗೆ ಆಸಕ್ತಿ ತೋರಿಸಿದ್ದರು. ಈ ಪೈಕಿ ಒಬ್ಬರು ಜೂನ್ 1ರ ಗಡುವಿನ ಮೊದಲು ಟೆಂಡರ್‌ನಿಂದ ಹಿಂದೆ ಸರಿದಿದ್ದು, ದಾಖಲೆಗಳ ಪರಿಶೀಲನೆಯ ಬಳಿಕ ಮುಂಬಯಿ ಮಹಾನಗರ ಪಾಲಿಕೆ ಇತರ ಒಂಬತ್ತು ಸಂಭಾವ್ಯ ಪೂರೈಕೆದಾರರನ್ನು ಅನರ್ಹಗೊಳಿಸಿದೆ.
ಲಸಿಕೆಗಳನ್ನು ಪೂರೈಸಲು ಸಿದ್ಧರಿರುವ ಪೂರೈಕೆದಾರರು ಮತ್ತು ಲಸಿಕೆ ಉತ್ಪಾದಿಸುವ ಕಂಪೆನಿಗಳ ನಡುವಿನ ವ್ಯವಹಾರ ಸಂಬಂಧವನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ಹೇಳಿದ್ದು, ಪರಿಶೀಲನೆಯು ಸಮಯೋಚಿತ ಪೂರೈಕೆಯ ಬಗ್ಗೆ ಭರವಸೆ, ಪ್ರಮಾಣಗಳನ್ನು ತಲುಪಿಸಲು ಬೇಕಾದ ಅವಧಿ, ಪ್ರಮಾಣ, ದರ ಮತ್ತು ಪಾವತಿಗಳ ಬಗ್ಗೆ ನಿಯಮಗಳು ಹೀಗೆ ನಾಲ್ಕು ಅಂಶಗಳ ಮೇಲೆ ಕೇಂದ್ರೀಕರಿಸಿದೆ. ಬಿಎಂಸಿ ಅಧಿಕಾರಿಗಳು ಡಾ| ರೆಡ್ಡಿ ಅವರ ಪ್ರಯೋಗಾಲಯಗಳೊಂದಿಗೆ ಸಭೆ ನಡೆಸಿದ್ದು, ಫಾರ್ಮಾ ಮೇಜರ್ ಸ್ಪುಟ್ನಿಕ್ ವಿ ಯ ಕೆಲವು ಪ್ರಮಾಣವನ್ನು ಪ್ರಾಯೋಗಿಕ ಆಧಾರದ ಮೇಲೆ ತಿಂಗಳ ಅಂತ್ಯದ ಮೊದಲು ಪೂರೈಸಲು ಒಪ್ಪಿಕೊಂಡಿದೆ. ಕಂಪನಿಯೊಂದಿಗೆ ಮುಂದಿನ ಸುತ್ತಿನ ಮಾತುಕತೆ 8-10 ದಿನಗಳಲ್ಲಿ ನಡೆಯಲಿದೆ ಎಂದು ಬಿಎಂಸಿ ತಿಳಿಸಿದೆ.