Advertisement

ಕೇರಳ-ದ.ಕ ಸಂಚಾರಕ್ಕೆ ನೆಗೆಟಿವ್‌ ವರದಿ ಕಡ್ಡಾಯ: ವೆನ್ಲಾಕ್‌ ಲ್ಯಾಬ್ ನಲ್ಲಿ ಹೆಚ್ಚಿದೆ ಒತ್ತಡ

11:57 PM Feb 23, 2021 | Team Udayavani |

ಮಹಾನಗರ: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯ ಎಂದು ದ.ಕ. ಜಿಲ್ಲಾಡಳಿತ ಈಗಾಗಲೇ ಆದೇಶಿಸಿದ್ದು, ಪರಿಣಾಮ ಮಂಗಳೂರು ನಗರದ ಬಹುತೇಕ ಕೊರೊನಾ ತಪಾಸಣ ಕೇಂದ್ರ ಮತ್ತು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಒತ್ತಡ ಹೆಚ್ಚಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಸಹಿತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ತಪಾಸಣೆ ನಡೆಸಲಾಗುತ್ತದೆ. ದ.ಕ. ಜಿಲ್ಲೆಯ 10 ಕಡೆಗಳಲ್ಲಿ ಐಸಿಎಂಆರ್‌ ಮಾನ್ಯತೆ ಪಡೆದ ಕೊರೊನಾ ಪ್ರಯೋಗಾಲಯಗಳಿವೆ. ಕೇರಳದಿಂದ ಆಗಮಿಸುವ ಮಂದಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಎಂದು ನಿರ್ದೇಶನ ಬಂದ ಬಳಿಕ ಬಹುತೇಕ ಲ್ಯಾಬ್‌ಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಮಂಗಳೂರಿನ ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಫೆ. 22ರಂದು 700 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು.

ಕಾಸರಗೋಡಿನಲ್ಲಿ ಕೆಲವೊಂದು ಕೊರೊನಾ ತಪಾಸಣ ಕೇಂದ್ರಗಳಲ್ಲಿ ಸೀಮಿತ ಮಂದಿಯ ತಪಾಸಣೆಗೆ ಮಾತ್ರ ಅವಕಾಶ ನೀಡುವ ಕಾರಣ ದ.ಕ. ಜಿಲ್ಲೆಯ ಲ್ಯಾಬ್‌ ಮತ್ತು ತಪಾಸಣ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಇದೇ ಕಾರಣಕ್ಕೆ ಕೇರಳ ಕಡೆಯಿಂದ ದ.ಕ. ಜಿಲ್ಲೆಗೆ ಉದ್ಯೋಗಿಗಳು, ದಿನನಿತ್ಯ ಸಂಚರಿಸುವವರಿಗೆ ಇದೀಗ ಮತ್ತೂಂದು ಸಂಕಷ್ಟ ಎದುರಾಗಿದೆ.

ನಮ್ಮ ಕಷ್ಟ ಯಾರಲ್ಲಿ ಹೇಳಲಿ
ಮಂಗಳೂರಿನಲ್ಲಿ ಕೆಲಸ ನಿರ್ವಹಿ ಸುತ್ತಿರುವ ಕಾಸರಗೋಡು ಮೂಲದ ಉದ್ಯೋಗಿಯೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಕಾಸರಗೋಡಿನ ಬಹುತೇಕ ಮಂದಿ ಒಂದಲ್ಲ ಒಂದು ವಿಚಾರದಲ್ಲಿ ದ.ಕ. ಜಿಲ್ಲೆ ಆಶ್ರಯಿಸಿದ್ದಾರೆ. ಜಿಲ್ಲೆಯ ಕೊರೊನಾ ತಪಾಸಣ ಕೇಂದ್ರಗಳಲ್ಲಿ ಒತ್ತಡ ಇರುವ ಕಾರಣ ತಿಂಗಳಲ್ಲಿ ಎರಡು ದಿನ ಕೆಲಸಕ್ಕೆ ರಜಾ ಹಾಕಿ ತಪಾಸಣೆಗೆ ಬರಬೇಕಿದೆ. ಖಾಸಗಿ ಲ್ಯಾಬ್‌ಗಳಲ್ಲಿ ತಪಾಸಣೆಗೆ ಹಣ ನೀಡಬೇಕು. ಕೊರೊನಾ ಕಾರಣದಿಂದಾಗಿ ನಮ್ಮ ಉದ್ಯೋಗವೇ ಸಮಸ್ಯೆಯಲ್ಲಿದ್ದು, ಈ ನಡುವೆ ಕರ್ನಾಟಕ ಪ್ರವೇಶಕ್ಕೆ ತಿಂಗಳಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದ.ಕ. ಜಿಲ್ಲಾಡಳಿತ ಈ ರೀತಿಯ ಕಠಿನ ಆದೇಶ ನೀಡುವ ಮುನ್ನ ನಮ್ಮ ಸಮಸ್ಯೆ, ಸಲಹೆಗಳನ್ನೂ ಆಲಿಸಬೇಕಿತ್ತು ಎನ್ನುತ್ತಾರೆ.

ಪ್ರಮಾಣ ಪತ್ರ ಕೈ ಸೇರಲು ವಿಳಂಬ
ಕೇರಳ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಕೊರೊನಾ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಕಡ್ಡಾಯ ಎಂದು ಆರೋಗ್ಯ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಪರೀಕ್ಷೆ ನಡೆಸಿದ 24 ಗಂಟೆಗಳ ಒಳಗಾಗಿ ವರದಿ ಕೈ ಸೇರುತ್ತದೆ ಎಂದು ಆರೋಗ್ಯ ಇಲಾಖೆ ಈ ಹಿಂದೆ ಸೂಚಿಸಿತ್ತು. ಆದರೆ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಒತ್ತಡ ಇರುವ ಕಾರಣದಿಂದಾಗಿ ಕೊರೊನಾ ವರದಿಗಾಗಿ ಎರಡು ದಿನಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಒತ್ತಡ ಹೆಚ್ಚಿದೆ
ಕೇರಳದ ನಾಲ್ಕು ಗಡಿ ಭಾಗಗಳಲ್ಲಿ ಮಾತ್ರ ಕೊರೊನಾ ನೆಗೆಟಿವ್‌ ಪ್ರಮಾಣ ಪತ್ರದ ಮುಖೇನ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಪರೀಕ್ಷೆಗೆ ಈಗಾಗಲೇ ಒತ್ತಡ ಹೆಚ್ಚಾಗಿದೆ. ಕೇರಳ ಭಾಗದಲ್ಲಿ ಸೀಮಿತ ಮಂದಿಗೆ ಮಾತ್ರ ತಪಾಸಣೆ ಮಾಡುತ್ತಿದ್ದು, ಹೆಚ್ಚಿನ ಮಂದಿ ದಕ್ಷಿಣ ಕನ್ನಡ ಜಿಲ್ಲೆ ಆಶ್ರಯಿಸಿದ್ದಾರೆ. ಇದೇ ಕಾರಣಕ್ಕೆ ತಪಾಸಣೆ ನಡೆಸಿ ವರದಿ ನೀಡಲೂ ತುಸು ವಿಳಂಬವಾಗುತ್ತಿದೆ.
-ಡಾ| ರಾಮಚಂದ್ರ ಬಾಯರಿ, ದ.ಕ. ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next