ಕಲಬುರಗಿ: ಕೋವಿಡ್ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದ ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಂಗಳವಾರ ಬಿಗಿ ಕ್ರಮ ವಹಿಸಲಾಗಿದ್ದು, ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬರುವ ಜನರು ಪರದಾಡುವಂತೆ ಆಗಿದೆ. ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದ ಮಹಿಳೆಯೊಬ್ಬರಿಗೆ ಗಡಿ ಪ್ರದೇಶಿಸಲು ಅವಕಾಶ ನೀಡದೆ ತಡೆದ ಘಟನೆ ಜಿಲ್ಲೆಯ ಬಳ್ಳೂರ್ಗಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಮಾರ್ಗವಾಗಿ ಮಹಿಳೆಯೊಬ್ಬರು, ವಿಜಯಪುರ ಜಿಲ್ಲೆಯ ಮೋರಟಗಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಹೋದರ ಅಂತ್ಯಕ್ರಿಯೆಗೆ ಹೊರಟಿದ್ದರು. ಈ ವೇಳೆ ಚೆಕ್ ಪೋಸ್ಟ್ ನಲ್ಲಿ ಮಹಿಳೆ ಸೇರಿ ಆಕೆಯ ಜೊತೆಗಿದ್ದವರನ್ನು ಅಧಿಕಾರಿಗಳು ತಡೆದು ತಪಾಸಣೆಗೆ ಒಳಪಡಿಸಿದರು.
ಈ ವೇಳೆ ಅವರಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದ ಕಾರಣ ರಾಜ್ಯ ಗಡಿ ಪ್ರವೇಶಿಸಲು ಮಹಿಳೆ ಸೇರಿ ಯಾರಿಗೂ ಬಿಡಲಿಲ್ಲ. ನನ್ನ ತಮ್ಮ ತೀರಿಕೊಂಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ಹೊರಟ್ಟಿದ್ದೇವೆ. ದಯಮಾಡಿ ನಮ್ಮನ್ನು ಬಿಡಿ, ಕೊನೆಯ ಬಾರಿ ತಮ್ಮನ ಮುಖ ನೋಡುತ್ತೇನೆ ಎಂದು ಚೆಕ್ ಪೋಸ್ಟ್ನಲ್ಲಿದ್ದ ತಹಶೀಲ್ದಾರರ ಮುಂದೆ ಮಹಿಳೆಯ ಪರಿಪರಿಯಾಗಿ ಬೇಡಿಕೊಂಡರು.
ಇದನ್ನೂ ಓದಿ:ಅವಧಿ ಮೀರಿದ ಔಷಧ ಮಾರಾಟ : ಇಬ್ಬರ ಬಂಧನ, 4 ಲಕ್ಷ ಮೌಲ್ಯದ ಔಷಧ ವಶ
ಆದರೆ, ಕೋವಿಡ್ ಆರ್‌ಟಿಪಿಸಿಆರ್ ವರದಿ ಇಲ್ಲದೇ ಬಿಡಲು ಬರುವುದಿಲ್ಲ ನಿಯಮಗಳನ್ನು ಪಾಲಿಸಲೇಬೇಕಾದ ಅಧಿಕಾರಿಗಳು ಗಡಿ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಅಸಹಾಯಕತೆಯಿಂದ ಮಹಿಳೆ ಮತ್ತು ಆಕೆಯ ಜತೆಗೆ ಬಂದಿದ್ದವರು ಹೋದರು. ಅಲ್ಲದೇ, ಮಹಾರಾಷ್ಟ್ರದ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳನ್ನು ಕೂಡ ಪ್ರಯಾಣಿಕರ ಸಮೇತ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದರು.
ಈ ನಡುವೆ ಪ್ರಯಾಣಿರ ಹೆಸರು, ಆಧಾರ್ ನಂಬರ್ ನೋಂದಣಿಗಾಗಿ ಚೆಕ್ ಪೋಸ್ಟ್ ಬಳಿ ಕಾದು ಕುಳಿತಕೊಳ್ಳುವ ಪರಿಸ್ಥಿತಿ ಇದ್ದು, ಪ್ರಯಾಣಿಕರಿಗೆ ಅಧಿಕಾರಿಗಳು ಕುಡಿಯುವ ನೀರು ಹಾಗೂ ಬಿಸ್ಕತ್ ವಿತರಿಸುವ ಕಾರ್ಯ ಮಾಡಿದ್ದಾರೆ.