Advertisement

ನಿಗಾ ಕೇಂದ್ರದಲ್ಲಿ ನರಕಯಾತನೆ

01:38 PM Aug 03, 2020 | Suhan S |

ವಿಜಯಪುರ: ಜಿಲ್ಲೆಯ ಹಲವು ಕೋವಿಡ್‌ ನಿಗಾ ಕೇಂದ್ರಗಳಲ್ಲಿ ದುರವಸ್ಥೆ ಕುರಿತು ದೂರುಗಳು ಕೇಳಿ ಬರುತ್ತಿವೆ. ಕೋವಿಡ್‌ ಕೇಂದ್ರಗಳಲ್ಲಿ ನಾಯಿಗಳಿಗಿಂತ ಕಡೆಯಾಗಿ ನೋಡಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಬಯಲಾಗಿದೆ. ಇದೀಗ ಕೋವಿಡ್‌ ನಿಗಾ ಕೇಂದ್ರವೊಂದರ ಅವ್ಯವಸ್ಥೆ ಕುರಿತು ಕೇಂದ್ರದ ಕ್ವಾರಂಟೈನ್‌ ನಿಗಾದಲ್ಲಿ ಇರುವವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್‌ ಕೇರ್‌ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರದಲ್ಲಿ ಮಹಿಳೆಯರು, ಪುರುಷರು ಸೇರಿ 32 ಸೋಂಕಿತರಿದ್ದಾರೆ. ಆದರೆ ಸದರಿ ಕೇಂದ್ರದಲ್ಲಿ ಕುಡಿಯುವ ಹಾಗೂ ಬಳಕೆ ನೀರಿನ ಕೊರತೆ, ಶೌಚಾಲಯಗಳ ದುರವಸ್ಥೆ, ಸ್ವಚ್ಛತೆ ಸೇರಿದಂತೆ ಕೇಂದ್ರದಲ್ಲಿ ತಾಂಡವಾಡುತ್ತಿರುವ ತ್ಯಾಜ್ಯದ ದುರ್ವಾಸನೆ ಕುರಿತು ಕ್ವಾರಂಟೈನ್‌ ಆಗಿರುವ ಸೋಂಕು ಶಂಕಿತರು ದೂರು ಹೇಳಿಕೊಂಡರೂ ಯಾರೊಬ್ಬರೂ ಗಮನ ಹರಿಸಿಲ್ಲ.  ಹೀಗಾಗಿ ಸದರಿ ಕೇಂದ್ರದಲ್ಲಿ ಕ್ವಾರಂಟೈನ್‌ ಆದವರೇ ತಮ್ಮ ತಮ್ಮ ಕೋಣೆಗಳ ಕಸ ಗೂಡಿಸಿಕೊಳ್ಳಬೇಕು. ಇಷ್ಟಾದರೂ ಸಮಸ್ಯೆ ಆಲಿಸಿ, ಪರಿಹಾರ ಕ್ರಮಕ್ಕೆ ಮುಂದಾಗಿಲ್ಲ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಹರಿಹಾಯ್ದಿದ್ದಾರೆ.

ಜಮ್ಮಲದಿನ್ನಿ ಗ್ರಾಮದ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಮಹಿಳೆಯರು, ಪುರುಷರು ಒಂದೇ ಕೇಂದ್ರದಲ್ಲಿ ನೆಲ ಮಾಳಿಗೆ ಹಾಗೂ ಮೊದಲ ಮಾಳಿಗೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಇಲ್ಲಿರುವ ಶೌಚಾಲಯಗಳಿಗೆ ನಳ ಇದ್ದರೂ ನೀರಿಲ್ಲ. ಜೋಡಿಸಿದ್ದ ಬಾಗಿಲು ಮುರಿದಿದ್ದು, ದುರಸ್ತಿ ಮಾಡಿಸಿಲ್ಲ. ಶೌಚಾಲಯಗಳಲ್ಲಿ ಸ್ವತ್ಛತೆ ಇಲ್ಲದ ಕಾರಣ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಹೀಗಾಗಿ ಸದರಿ ಕೇಂದ್ರದಲ್ಲಿ ಶೌಚಕ್ಕೆ ಗೋಡೆಗಳಿದ್ದರೂ ಬಾಗಿಲಿಲ್ಲ. ಮಹಿಳೆಯರಂತೂ ಮುಜುಗುರದಿಂದಲೇ ಜೀವನ ನಡೆಸುತ್ತಿದ್ದಾರೆ. ಈ ಕೇಂದ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಗಂಭೀರವಾಗಿದೆ. ಕೇಂದ್ರದಲ್ಲಿರುವ ಎಲ್ಲರಿಗೂ ಒಂದೇ ಟ್ಯಾಂಕರ್‌ ನೀರಿನ ಬಳಕೆ ಮಾಡಬೇಕಿದೆ. ಹೀಗಾಗಿ ಮೇಲಿರುವ ಟ್ಯಾಂಕರ್‌ನಿಂದ ಬಕೇಟ್‌ಗಳಲ್ಲಿ ಕ್ವಾರಂಟೈನ್‌ ಆದವರೇ ಹೊತ್ತೂಯ್ಯಬೇಕು. ನೀರಿನ ಕೊರತೆ ಕಾರಣ ನೀರಿಗಾಗಿ ಸೋಂಕಿತರಲ್ಲಿ ಕಿತ್ತಾಡಿಕೊಳ್ಳುವ ದಯನೀಯ ಸ್ಥಿತಿ ಇದೆ.

ಹೀಗಾಗಿ ನೀರಿನ ಸಮಸ್ಯೆಯಿಂದಾಗಿ ಹಲವರು ವಾರವಾದರೂ ಸ್ನಾನ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ. ಇನ್ನು ಸದರಿ ಕೋವಿಡ್‌ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಕೋವಿಡ್‌ ಕ್ವಾರಂಟೈನ್‌ ಆದವರಿಗೆ, ಇವರ ಮೇಲೆ ನಿಗಾ ಇರಿಸಲು ನೇಮಿಸಿರುವ ಅಧಿಕಾರಿ-ಸಿಬ್ಬಂದಿ ಬಳಸಿ ಬಿಸಾಡಿದ ವೈದ್ಯಕೀಯ ತ್ಯಾಜ್ಯ ಸೇರಿದಂತೆ ಎಲ್ಲೆಂದರಲ್ಲಿ ಕಸದ ರಾಶಿ ಸೃಷ್ಟಿಸಿದೆ. ಸದರಿ ಕೇಂದ್ರದಲ್ಲಿ ಕಸ ಗೂಡಿಸಲು ಕೂಡ ಸಿಬ್ಬಂದಿ ಇಲ್ಲದ ದುಸ್ಥಿತಿ ಇದ್ದು ಹಲವು ದಿನಗಳಿಂದ ಕಸ ವಿಲೇವಾರಿ ಮಾಡದ ಕಾರಣ ಕೇಂದ್ರದಲ್ಲಿ ದುರ್ವಾಸನೆ ಹರಡಿಕೊಂಡಿದೆ. ವೈದ್ಯಕೀಯ ಆರೈಕೆಗೆ ಬಂದಿರುವ ಈ ಕೇಂದ್ರದಲ್ಲಿ ರೋಗ ಇಲ್ಲದವರಿಗೂ ರೋಗ ಬಾಧಿಸುವ ಪರಿಸ್ಥಿತಿ ಇದೆ ಎಂದು ದೂರುತ್ತಿದ್ದಾರೆ.

ಬೆಂಗಳೂರಿನಿಂದ ಬಂದಿರುವ ಸೋಂಕಿತರೊಬ್ಬರು ಸದರಿ ಕೋವಿಡ್‌ ಕೇಂದ್ರದಲ್ಲಿ ಇರುವ ದುಸ್ಥಿತಿ ಕಣ್ಣಿನಿಂದ ನೋಡುವುದೇ ಅಸಾಧ್ಯವಾಗಿದೆ. ಇಂತ ಸ್ಥಿತಿಯಲ್ಲಿ ನಾವು ಕ್ವಾರಂಟೈನ್‌ ಜೀವನ ನಡೆಸುವುದು ದುಸ್ಥರವಾಗಿದೆ. ಇಂತ ಅವ್ಯವಸ್ಥೆಯ ಕ್ವಾರಂಟೈನ್‌ ನಿಗಾದಲ್ಲಿ ನಮ್ಮನ್ನು ಇರಿಸುವುದಕ್ಕಿಂತ ಮನೆಯಲ್ಲೇ ಕ್ವಾರಂಟೈನ್‌ ಆಗಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಸದರಿ ಕೇಂದ್ರದ ಉಸ್ತುವಾರಿಗೆ ಇರುವ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸುತ್ತಿಲ್ಲ. ಕೂಡಲೇ ಸ್ಥಳೀಯ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸದರಿ ಕೋವಿಡ್‌ ಕೇಂದ್ರದ ಸಮಸ್ಯೆ ಸರಿಪಡಿಸಬೇಕು. ಇಲ್ಲವಾದಲ್ಲಿ ಕೇಂದ್ರದಲ್ಲಿರುವ ರೋಗಿಗಳನ್ನು ಬಿಡುಗಡೆ ಮಾಡಿ, ಮನೆಗಳಲ್ಲೇ ಕ್ವಾರಂಟೈನ್‌ ಆಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next