Advertisement

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

11:58 PM Jan 16, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕಿನ 3ನೇ ಅಲೆಯು ಇಳಿಮುಖವಾಗುತ್ತಿರುವ ಲಕ್ಷಣ ಗೋಚರಿಸಿದೆ. ಒಬ್ಬ ಸೋಂಕಿತ ಎಷ್ಟು ಮಂದಿಗೆ ಸೋಂಕನ್ನು ಹಬ್ಬಬಲ್ಲ ಎಂಬುದನ್ನು ತೋರಿಸುವ “ಆರ್‌ ವ್ಯಾಲ್ಯೂ’ ದೇಶಾದ್ಯಂತ ಈಗ 2.2ಕ್ಕಿಳಿದಿರುವುದೇ ಕೊರೊನಾ ತಗ್ಗುತ್ತಿರುವ ಸುಳಿವನ್ನು ನೀಡಿದೆ.

Advertisement

ಆರ್‌ ವ್ಯಾಲ್ಯೂ ಯಾವಾಗ 1ಕ್ಕಿಂತ ಕೆಳಕ್ಕೆ ಇಳಿಯುತ್ತದೋ ಆಗ ಸೋಂಕು ಅಂತ್ಯವಾಯಿತು ಎಂದರ್ಥ. ಭಾರತದ ಮಟ್ಟಿಗೆ ನೋಡುವುದಾದರೆ ಡಿಸೆಂಬರ್‌ 25ರಿಂದ 31ರ ಅವಧಿಯಲ್ಲಿ ಆರ್‌ ವ್ಯಾಲ್ಯೂ 2.9ರಷ್ಟಿತ್ತು. ಜ.1ರಿಂದ 6ರ ಅವಧಿಯಲ್ಲಿ ಇದು 4ಕ್ಕೇರಿತ್ತು. ಆದರೆ ಜ.7ರಿಂದ 13ರ ಅವಧಿಯಲ್ಲಿ 2.2ಕ್ಕಿಳಿದಿದೆ. ಅಂದರೆ ಸೋಂಕಿನ ವ್ಯಾಪಿಸುವಿಕೆ ಕಡಿಮೆಯಾಗಿದ್ದು, 3ನೇ ಅಲೆಯ ತೀವ್ರತೆ ಇಳಿಮುಖವಾಗಿರುವುದನ್ನು ಇದು ತೋರಿಸಿದೆ ಎಂದು ಐಐಟಿ ಮದ್ರಾಸ್‌ನ ವಿಶ್ಲೇಷಣ ವರದಿ ಹೇಳಿದೆ.

ದೈನಂದಿನ ಸೋಂಕು: ಶನಿವಾರದಿಂದ ರವಿವಾರಕ್ಕೆ ದೇಶಾದ್ಯಂತ 2,71,202 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಮಿಕ್ರಾನ್‌ ಕೇಸುಗಳ ಸಂಖ್ಯೆ 7,743ಕ್ಕೇರಿದೆ. ಮಹಾರಾಷ್ಟ್ರದಲ್ಲಿ ರವಿವಾರ 41,327 ಮಂದಿಗೆ ಕೊರೊನಾ ತಗಲಿದ್ದು, 29 ಸಾವು ಸಂಭವಿಸಿದೆ. ಯುಎಇಯಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬಂದೊಡನೆ ಆರ್‌ಟಿ ಪಿಸಿಆರ್‌ ಪರೀಕ್ಷೆ ಮತ್ತು ಹೋಂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ಬೃಹನ್ಮುಂಬಯಿ ನಗರ ಪಾಲಿಕೆ ಆದೇಶ ಹೊರಡಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ 20% ಸಮೀಪಕ್ಕೆ : ಇಂದು 13 ಸಾವು

ಕೊರೊನಾ: 1.47 ಲಕ್ಷ ಮಕ್ಕಳು ಅನಾಥ
ಹೊಸದಿಲ್ಲಿ: ಭಾರತಕ್ಕೆ ಕೊರೊನಾ ಅಪ್ಪಳಿಸಿದ ಅನಂತರ ಅಂದರೆ 2020, ಎ.1ರಿಂದ 1,47,492 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನಿತರ ಕಾರಣಗಳಿಂದ ಪೋಷಕರಿಲ್ಲದ ಮಕ್ಕಳೂ ಈ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣ ಆಯೋಗ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದೆ.

Advertisement

ಮಕ್ಕಳ ರಕ್ಷಣೆ ವಿಚಾರದಲ್ಲಿ ಕಳವಳಗೊಂಡು ಸರ್ವೋಚ್ಚ ಪೀಠ ಸ್ವಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಎನ್‌ಸಿಪಿಸಿಆರ್‌ ಈ ಮಾಹಿತಿ ನೀಡಿದೆ. ತನ್ನ ಬಾಲ ಸ್ವರಾಜ್‌ ವೆಬ್‌ಸೈಟ್‌ನಲ್ಲಿ ಜ.11ರ ವರೆಗೆ ಸಲ್ಲಿಸಲ್ಪಟ್ಟಿರುವ ಮಾಹಿತಿ ಪ್ರಕಾರ, 10,094 ಮಕ್ಕಳು ಅನಾಥರಾಗಿದ್ದಾರೆ. 1,36,910 ಮಕ್ಕಳು ಅಪ್ಪ ಅಮ್ಮನ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 488 ಮಕ್ಕಳು ಪೋಷಕರಿಂದ ತ್ಯಜಿಸಲ್ಪಟ್ಟಿದ್ದಾರೆ ಎಂದು ಎನ್‌ಸಿಪಿಸಿಆರ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next