Advertisement

ಮರು ಅಲೆ ಹೊಡೆತ; ನಿರ್ಬಂಧ ಆತಂಕ

12:07 PM Nov 03, 2015 | sudhir |

ಕೊರೊನಾ ಸೋಂಕಿನ ಅಬ್ಬರಕ್ಕೆ ಬೆಚ್ಚಿಬಿದ್ದ ಜಗತ್ತಿನ ಬಹುತೇಕ ದೇಶಗಳಲ್ಲೀಗ ಮತ್ತೂಂದು ಸುತ್ತಿನ ಆತಂಕ ಮನೆಮಾಡಿದೆ. ಹಲವು ರಾಷ್ಟ್ರಗಳಲ್ಲಿ ಸೋಂಕಿನ 2ನೇ ಹಂತದ ವ್ಯಾಪಿಸುವಿಕೆ ಆರಂಭವಾದರೆ ಒಂದೆರಡು ದೇಶಗಳಲ್ಲಿ ಪರಿಸ್ಥಿತಿ ಸಹಜತೆಗೆ ಬರುತ್ತಿದೆ. ಲಾಕ್‌ಡೌನ್‌ ತೆರವು, ಶಾಲೆ-ಕಾಲೇಜುಗಳ ಆರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ಮತ್ತಿತರ ಕ್ರಮಗಳು ಸೋಂಕಿನ 2ನೇ ಅಲೆಗೆ ಇಂಬು ನೀಡಿದೆ. ಯಾವ ದೇಶದಲ್ಲಿ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Advertisement

ಅಮೆರಿಕ
ಕೊರೊನಾ 2ನೇ ಹಂತದ ವ್ಯಾಪಿಸುವಿಕೆ ಆರಂಭವಾಗಿರುವ ಸುಳಿವು ದೊರೆತಿದ್ದು, ಸೆಪ್ಟಂಬರ್‌ನಲ್ಲಿ ದಿನಕ್ಕೆ 30ರಿಂದ 35 ಸಾವಿರದಷ್ಟಿದ್ದ ಸೋಂಕು ಪ್ರಕರಣಗಳು ಈಗ 60 ಸಾವಿರದಷ್ಟಾಗುತ್ತಿವೆ. ಇಲಿನಾಯ್ಸ, ಇಂಡಿಯಾನಾ, ಮಿಚಿಗನ್‌, ನೆಬ್ರಾಸ್ಕಾ ಮತ್ತು ವಿಸ್ಕನ್ಸಿನ್‌ನಲ್ಲಿ ಅತ್ಯಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಚಳಿಗಾಲ ಆರಂಭವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಉಂಟಾಗುವ ಭೀತಿಯಿದೆ.

ಯು.ಕೆ.
ಪರಿಸ್ಥಿತಿ ಗಂಭೀರ ಹಾಗೂ ಅನಿಶ್ಚಿತವಾಗಿದ್ದು, ಮತ್ತೆ ನಾವು ಮಾರ್ಚ್‌ನಲ್ಲಿದ್ದ ಸ್ಥಿತಿಗೆ ಹೊರಳುತ್ತಿದ್ದೇವೆ ಎಂದು ಯು.ಕೆ. ಸರಕಾರದ ಪ್ರಮುಖ ಸಲಹೆಗಾರರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಜಾರಿಗೆ ಬರುವಂತೆ ಹೊಸದಾಗಿ ಕಠಿನ ನಿರ್ಬಂಧ ಹೇರಲಾಗಿದೆ. ಯಾರು ಕೂಡ ಮನೆಗಳಿಂದ ಹೊರಬರಬಾರದು, ಪರಸ್ಪರರ ಮನೆಗಳಿಗೆ ಭೇಟಿ ನೀಡಬಾರದು, ಅನಿವಾರ್ಯ ವಾಗಿ ಹೊರಹೋಗಬೇಕೆಂದರೆ ಸೈಕಲ್‌ ಅಥವಾ ಸ್ವಂತ ವಾಹನ ಬಳಸಬೇಕು ಎಂದು ಸೂಚಿಸಲಾಗಿದೆ.

ಇಟಲಿ
ಭಾರೀ ಸಾವು-ನೋವುಗಳನ್ನು ಕಂಡ ಇಟಲಿಯಲ್ಲಿ ಈಗ ಮತ್ತೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಎಲ್ಲ ರೀತಿಯ ಸಾರ್ವಜನಿಕ ಕಾರ್ಯ ಕ್ರಮ, ಗುಂಪುಗೂಡುವುದಕ್ಕೆ ನಿಷೇಧ ಹೇರಲಾಗಿದೆ. 6ಕ್ಕಿಂತ ಹೆಚ್ಚು ಜನ ಎಲ್ಲೂ ಸೇರುವಂತಿಲ್ಲ ಎಂಬ “ರೂಲ್‌ ಆಫ್ 6′ ನಿಯಮ ಜಾರಿಗೆ ಬಂದಿದೆ. ಆಹಾರ ಸೇವಿಸುವಾಗ ಹೊರತುಪಡಿಸಿ ಉಳಿದೆಲ್ಲ ಸಮಯ ದಲ್ಲೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಯುಎಇ
24 ಗಂಟೆಗಳಲ್ಲಿ 1,538 ಹೊಸ ಪ್ರಕರಣ ಪತ್ತೆಯಾಗಿದ್ದು, ಈವರೆಗಿನ ದೈನಂದಿನ ಪ್ರಕರಣಗಳಲ್ಲಿ ಇದು ಅತ್ಯಧಿಕ ಎಂದು ಆರೋಗ್ಯ ಇಲಾಖೆ ಹೇಳಿದೆ. ನವರಾತ್ರಿ ಆರಂಭವಾಗಿದ್ದರೂ ಹಬ್ಬಗಳನ್ನು ಮನೆಗಳಲ್ಲೇ ಆಚರಿಸುವಂತೆ ಸರಕಾರ ಸೂಚಿಸಿದೆ. ಬರ್‌ ದುಬಾೖಯಲ್ಲಿನ ಹಿಂದೂ ದೇಗುಲದಲ್ಲಿ ಈ ವರ್ಷ ಹಬ್ಬ ಆಚರಣೆಗೆ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 30 ನಿಮಿಷ, ಸಂಜೆ 30 ನಿಮಿಷ ಪೂಜೆ ಸಲ್ಲಿಸಲು ಅವಕಾಶವಿದೆ.

Advertisement

ಬ್ರೆಜಿಲ್‌
ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಸದ್ಯ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಇಲ್ಲೂ ಸೋಂಕಿನ ಎರಡನೇ ಅಲೆಯ ಭೀತಿ ಶುರುವಾಗಿದೆ. ಈವರೆಗೆ 50 ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಸ್ಪೇನ್‌
ಇಲ್ಲಿ ಮತ್ತೆ ದಾಖಲೆ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಲಾಕ್‌ಡೌನ್‌ ತೆರವಾದ ಬಳಿಕ ಶಾಲೆಗಳು ಪುನರಾರಂಭಗೊಂಡಿದ್ದು, ಶೈಕ್ಷಣಿಕ ಸಂಸ್ಥೆಗಳೇ ಈಗ ವೈರಸ್‌ ವ್ಯಾಪಿಸುವಿಕೆಯ ಮೂಲಗಳಾಗಿ ಪರಿವರ್ತನೆಯಾಗುತ್ತಿವೆ. 2ನೇ ಹಂತದ ವ್ಯಾಪಿಸುವಿಕೆ ಆರಂಭವಾಗಿದೆ. ಸಲಾಮಂಕಾ ನಗರದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗುತ್ತಿದ್ದು, ಅಲ್ಲಿ 2 ವಾರಗಳ ಕಾಲ ಲಾಕ್‌ಡೌನ್‌ ಘೋಷಿಸಲಾಗಿದೆ.

ಫ್ರಾನ್ಸ್‌
ಸೋಂಕಿನ ಎರಡನೇ ಅಲೆಯ ಆಘಾತಕ್ಕೆ ಫ್ರಾನ್ಸ್‌ ಸಿಲುಕಿದೆ. ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಪ್ಯಾರಿಸ್‌ ಸೇರಿದಂತೆ 9 ನಗರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದ ಹೊಸ ನಿಯಮ ಜಾರಿಯಾಗಿದ್ದು, ಮುಂದಿನ 4 ವಾರಗಳ ಕಾಲ ಇರುತ್ತದೆ. ಅಂಗಡಿ-ಮುಂಗಟ್ಟುಗಳು, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ.

ಸುರಕ್ಷತೆಯೊಂದಿಗೆ ರಾಜಿಯಿಲ್ಲ!
ಇಟಲಿಯ ನೋಟೋìಸ್‌ ಎಂಬ ಪುಟ್ಟ ಪಟ್ಟಣದಲ್ಲಿ ಇರುವುದು ಇಬ್ಬರೇ ವ್ಯಕ್ತಿಗಳು. ಅವರ ಹೆಸರು ಗಿಯೋ ವನ್ನಿ ಕ್ಯಾರಿಲಿ(82) ಮತ್ತು ಗಿಯಾಂಪಿರೋ ನೊಬಿಲಿ(74). ಆದರೆ, ಇವರೆಂದಿಗೂ ಸುರಕ್ಷತೆಯೊಂದಿಗೆ ರಾಜಿ ಮಾಡಿ ಕೊಂಡಿಲ್ಲ. ಇಡೀ ಪಟ್ಟಣಕ್ಕೆ ನಾವಿಬ್ಬರೇ ಇರುವುದು ಎಂದು ಗೊತ್ತಿದ್ದರೂ, ಹಿರಿಯ ನಾಗರಿಕರಾದ ಕ್ಯಾರಿಲಿ ಮತ್ತು ನೊಬಿಲಿ ಸದಾ ಮಾಸ್ಕ್ ಧರಿಸಿಕೊಂಡೇ ಇರುತ್ತಾರೆ. ಅಲ್ಲದೆ ಪರಸ್ಪರ ಭೇಟಿಯಾದಾಗ 3 ಅಡಿಗಳ ಶಾರೀರಿಕ ಅಂತರವನ್ನೂ ಕಾಪಾಡಿಕೊಳ್ಳುತ್ತಾರೆ. ಸರಕಾರ ನಮ್ಮ ಸುರಕ್ಷತೆಗಾಗಿ ಕಠಿನ ನಿರ್ಬಂಧ ಹೇರಿರುವಾಗ, ನಾವೇ ಪಾಲಿಸದಿದ್ದರೆ ಹೇಗೆ ಎಂದು ಪ್ರಶ್ನಿಸುತ್ತಾರೆ ಕ್ಯಾರಿಲಿ ಮತ್ತು ನೊಬಿಲಿ.

Advertisement

Udayavani is now on Telegram. Click here to join our channel and stay updated with the latest news.

Next